ಪ್ರಲಾಪಗಳು

1 2 3 4 5


ಅಧ್ಯಾಯ 1

1 ಜನಭರಿತವಾಗಿದ್ದ ನಗರಿಯು ಹೇಗೆ ಒಂಟಿಯಾಗಿ ಕೂತುಕೊಂಡಿದ್ದಾಳೆ! ಅವಳು ಹೇಗೆ ವಿಧವೆಯಾದಳು! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ ಹೇಗೆ ಕಪ್ಪವನ್ನು ಕೊಡುವಂಥವಳಾದಳು!
2 ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
3 ಯೆಹೂದವು ಸಂಕಟದ ನಿಮಿತ್ತವೂ ಘೋರವಾದ ದಾಸ್ಯದ ನಿಮಿತ್ತವೂ ಸೆರೆಯಾಗಿ ಹೋಯಿತು; ಆಕೆಯು ಅನ್ಯಜನಾಂಗಗಳೊಳಗೆ ವಾಸಮಾಡುವವಳಾಗಿ ವಿಶ್ರಾಂತಿಯನ್ನು ಕಾಣಳು; ಅವಳನ್ನು ಹಿಂಸಿಸುವವ ರೆಲ್ಲರೂ ಅವಳನ್ನು ಇಕ್ಕಟ್ಟಿನ ಮಧ್ಯದಲ್ಲಿ ಸಿಕ್ಕಿಸಿರುತ್ತಾರೆ.
4 ಚೀಯೋನಿನ ಮಾರ್ಗಗಳು ದುಃಖಿಸುತ್ತವೆ, ಯಾಕಂದರೆ ಪವಿತ್ರ ಹಬ್ಬಗಳಿಗೆ ಯಾರೂ ಬರಲಿಲ್ಲ; ಆಕೆಯ ಎಲ್ಲಾ ಬಾಗಿಲುಗಳು ಹಾಳುಬಿದ್ದಿವೆ. ಯಾಜಕರು ನಿಟ್ಟುಸಿರಿಡುತ್ತಾರೆ, ಕನ್ಯೆಯರು ಸಂಕಟಪಡುತ್ತಾರೆ. ಆಕೆಯು ವ್ಯಥೆಯಲ್ಲಿದ್ದಾಳೆ.
5 ಆಕೆಯ ವೈರಿಗಳು ಪ್ರಮುಖರಾದರು, ಶತ್ರುಗಳು ಅಭಿವೃದ್ಧಿಯಾಗಿ ದ್ದಾರೆ; ಅನೇಕ ಅಪರಾಧಗಳ ನಿಮಿತ್ತ ಕರ್ತನು ಆಕೆಯನ್ನು ಸಂಕಟಪಡಿಸಿದ್ದಾನೆ. ಆಕೆಯ ಮಕ್ಕಳು ಶತ್ರು ವಿನ ಮುಂದೆ ಸೆರೆಗೆ ಹೋಗಿದ್ದಾರೆ.
6 ಚೀಯೋನಿನ ಮಗಳ ಎಲ್ಲಾ ಸೌಂದರ್ಯವು ಅವಳನ್ನು ಬಿಟ್ಟು ಹೋಯಿತು. ಅವಳ ಪ್ರಧಾನರು ಮೇವು ಕಾಣದ ಜಿಂಕೆಗಳ ಹಾಗಾದರು. ಅವರು ಹಿಂದಟ್ಟುವವನ ಮುಂದೆ ತ್ರಾಣವಿಲ್ಲದವರ ಹಾಗೆ ಹೋದರು.
7 ಯೆರೂಸಲೇಮು ಕಷ್ಟ ಮತ್ತು ಸಂಕಟದಲ್ಲಿದ್ದಾಗ ಪೂರ್ವದಿನಗಳಲ್ಲಿ ತನಗಿದ್ದ ರಮ್ಯವಾದವುಗಳೆಲ್ಲವನ್ನು ಜ್ಞಾಪಕಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ ಯಾವನೂ ಸಹಾಯಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ಸಬ್ಬತ್ತುಗಳ ವಿಷಯದಲ್ಲಿ ಅಪಹಾಸ್ಯಮಾಡಿದರು.
8 ಯೆರೂಸ ಲೇಮು ಘೋರವಾಗಿ ಪಾಪಮಾಡಿದೆ; ಆದದರಿಂದ ಅವಳು ತೆಗೆದುಹಾಕಲ್ಪಟ್ಟಿದ್ದಾಳೆ; ಅವಳನ್ನು ಸನ್ಮಾನಿಸಿ ದವರೆಲ್ಲರೂ ಅವಳನ್ನು ಹೀನೈಸುತ್ತಾರೆ; ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ; ಹೌದು, ಅವಳು ನಿಟ್ಟುಸಿರಿಟ್ಟು ಹಿಂದಕ್ಕೆ ತಿರುಗುತ್ತಾಳೆ.
9 ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
10 ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
11 ಅವಳ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಅವರು ರೊಟ್ಟಿಯನ್ನು ಹುಡುಕುತ್ತಾರೆ. ಅವರು ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ ರಮ್ಯವಾದವುಗಳನ್ನು ಆಹಾರ ಕ್ಕಾಗಿ ಕೊಟ್ಟಿದ್ದಾರೆ. ಓ ಕರ್ತನೇ, ನೋಡು, ಲಕ್ಷಿಸು; ನಾನು ಭ್ರಷ್ಠಳಾದೆನು.
12 ಹಾದು ಹೋಗುವ ವರೆಲ್ಲರೇ, ಇದು ನಿಮಗೆ ಏನೂ ಅಲ್ಲವೋ? ಇಗೋ, ಕರ್ತನ ಕೋಪ ಉರಿಯುವ ದಿನದಲ್ಲಿ ನನ್ನನ್ನು ಸಂಕಟಪಡಿಸಿದ ನನ್ನ ದುಃಖದ ಹಾಗೆ ಬೇರೆ ಯಾವ ದುಃಖವಾದರೂ ಇದ್ದರೆ ನೋಡಿರಿ.
13 ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.
14 ನನ್ನ ಅಕ್ರಮಗಳ ನೊಗವು ಆತನ ಕೈಯಿಂದ ಕಟ್ಟಲ್ಪಟ್ಟಿದೆ; ಅವು ಹೆಣೆಯಲ್ಪಟ್ಟಿವೆ; ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ಮೇಲೆ ಬರುತ್ತವೆ. ಆತನು ನನ್ನ ಶಕ್ತಿಯು ಕುಗ್ಗುವ ಹಾಗೆ ಮಾಡಿದನು, ಕರ್ತನು ನನ್ನನ್ನು ಅವರ ಕೈಗಳಿಗೆ ಒಪ್ಪಿಸಿ ಅವರಿಂದ ನಾನು ಎದ್ದೇಳಲು ಶಕ್ತನಾಗದಂತೆ ಮಾಡಿದ್ದಾನೆ.
15 ಕರ್ತನು ನನ್ನ ಎದುರಿನಲ್ಲಿ ನನ್ನ ಪರಾಕ್ರಮಶಾಲಿಗಳನ್ನೆಲ್ಲಾ ಕಾಲಿನ ಕೆಳಗೆ ತುಳಿದುಬಿಟ್ಟಿದ್ದಾನೆ; ಆತನು ನನ್ನ ಯೌವನಸ್ಥರನ್ನು ಜಜ್ಜಲು ನನಗೆ ವಿರುದ್ಧವಾಗಿ ಸಭೆಯನ್ನು ಕರೆದಿದ್ದಾನೆ; ಕರ್ತನು ಯೆಹೂದದ ಮಗಳಾದ ಕನ್ಯೆಯನ್ನು ದ್ರಾಕ್ಷೆಯ ತೊಟ್ಟಿಯಂತೆ ತುಳಿದಿದ್ದಾನೆ.
16 ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ.
17 ಚೀಯೋನ್‌ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
18 ಕರ್ತನು ನೀತಿವಂತನು, ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇನೆ; ಎಲ್ಲಾ ಜನರೇ, ಕೇಳಿರಿ, ನಾನು ನಿಮ್ಮನ್ನು ಕೇಳಿ ಕೊಳ್ಳುತ್ತೇನೆ; ನನ್ನ ದುಃಖವನ್ನು ನೋಡಿರಿ, ನನ್ನ ಕನ್ಯೆಯರೂ ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ.
19 ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
20 ಓ ಕರ್ತನೇ, ನೋಡು; ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನ ಕರುಳುಗಳು ನನ್ನ ಹೃದಯವು ಮಗಚಿಕೊಂಡಿದೆ. ನಾನು ಘೋರವಾಗಿ ತಿರುಗಿಬಿದ್ದಿದ್ದೇನೆ. ಹೊರಗೆ ಕತ್ತಿ ಯಿಂದ ಸಂಹಾರ, ಮನೆಯೊಳಗೆ ಮರಣ.
21 ನಾನು ನಿಟ್ಟುಸಿರಿಡುವದನ್ನು ಅವರು ಕೇಳಿದರೂ ನನ್ನನ್ನು ಆದರಿ ಸಲು ಯಾರೂ ಅಲ್ಲಿರಲಿಲ್ಲ; ನನ್ನ ಶತ್ರುಗಳೆಲ್ಲಾ ನನ್ನ ಕಷ್ಟದ ವಿಷಯವನ್ನು ಕೇಳಿದರು; ನೀನು ಹಾಗೆ ಮಾಡಿದೆಯೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು ಅವರು ನನ್ನ ಹಾಗೆಯೇ ಆಗುವರು.
22 ಅವರ ಕೆಡುಕೆಲ್ಲಾ ನಿನ್ನ ಮುಂದೆ ಬರಲಿ; ನನ್ನ ಎಲ್ಲಾ ದ್ರೋಹಗಳ ನಿಮಿತ್ತ ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು; ನನ್ನ ನಿಟ್ಟು ಸಿರುಗಳು ಅನೇಕವಾಗಿವೆ; ನನ್ನ ಹೃದಯವು ಕುಂದಿದೆ.
ಅಧ್ಯಾಯ 2

1 ಕರ್ತನು ಹೇಗೆ ತನ್ನ ಕೋಪದಲ್ಲಿ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ, ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದು ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನು ಜ್ಞಾಪಕಮಾಡಿಕೊಳ್ಳಲಿಲ್ಲಾ!
2 ಕರ್ತನು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾನೆ; ಯೆಹೂದದ ಮಗಳ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿಹಾಕಿ ದ್ದಾನೆ; ಆತನು ಅವುಗಳನ್ನು ನೆಲ ಸಮ ಮಾಡಿದ್ದಾನೆ; ಆತನು ರಾಜ್ಯವನ್ನೂ ಪ್ರಭುಗಳನ್ನೂ ಅಪವಿತ್ರ ಮಾಡಿದ್ದಾನೆ.
3 ಆತನು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಕಡಿದು ಹಾಕಿದ್ದಾನೆ. ಆತನು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾನೆ. ಆತನು ಸುತ್ತಲೂ ಪ್ರಜ್ವಲಿಸಿ ದಹಿಸುವ ಬೆಂಕಿಯ ಹಾಗೆ ಯಾಕೋಬನಿಗೆ ವಿರುದ್ಧ ವಾಗಿ ದಹಿಸಿಬಿಟ್ಟಿದ್ದಾನೆ.
4 ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್‌ ಮಗಳ ಗುಡಾರದಲ್ಲಿ ಸುರಿದಿದ್ದಾನೆ.
5 ಕರ್ತನು ಶತ್ರುವಿನಂತೆ ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾನೆ; ಆತನು ಅವನ ಅರಮನೆಗಳನ್ನೆಲ್ಲಾ ನುಂಗಿಬಿಟ್ಟಿದ್ದಾನೆ, ಆತನು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾನೆ; ಯೆಹೂದದ ಮಗಳ ದುಃಖವನ್ನೂ ಪ್ರಲಾಪವನ್ನೂ ಹೆಚ್ಚಿಸಿದ್ದಾನೆ.
6 ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ.
7 ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ.
8 ಕರ್ತನು ಚೀಯೋನಿನ ಮಗಳ ಗೋಡೆಯನ್ನು ನಾಶ ಮಾಡಬೇಕೆಂದು ಉದ್ದೇಶಿಸಿದ್ದಾನೆ; ಗೆರೆಯನ್ನು ಎಳೆದಿದ್ದಾನೆ. ತನ್ನ ಕೈಯನ್ನು ಕೆಡಿಸುವದರಿಂದ ಹಿಂತೆಗೆಯಲಿಲ್ಲ; ಕಲ್ಲಿನ ಪ್ರಾಕಾರವನ್ನೂ ಮತ್ತು ಗೋಡೆ ಯನ್ನೂ ಗೋಳಾಡುವಂತೆ ಆತನು ಮಾಡಿದ್ದಾನೆ, ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ.
9 ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ.
10 ಚೀಯೋನ್‌ ಮಗಳ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಯಬ್ಧವಾಗಿದ್ದಾರೆ; ತಮ್ಮ ತಲೆಗಳ ಮೇಲೆ ದೂಳು ಹಾಕಿಕೊಂಡಿದ್ದಾರೆ; ಅವರು ಗೊಣೀತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇ ಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬೊಗ್ಗಿಸಿಕೊಂಡಿದ್ದಾರೆ.
11 ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ.
12 ಅವರು ನಗರದ ಬೀದಿ ಗಳಲ್ಲಿ ಗಾಯ ಪಟ್ಟವರ ಹಾಗೆ ಮೂರ್ಛೆ ಹೋಗಿ, ತಮ್ಮ ತಾಯಂದಿರ ಎದೆಯಲ್ಲಿ ಬೀಳುತ್ತಾ--ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ ಎಂದು ತಮ ತಾಯಂದಿರಿಗೆ ಹೇಳುತ್ತಾರೆ.
13 ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?
14 ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮೂರ್ಖತನದ ವಿಷಯಗಳನ್ನು ನೋಡಿದ್ದಾರೆ. ಅವರು ನಿನ್ನ ದುರವಸ್ಥೆಯನ್ನು ನೀಗಿಸುವದಕ್ಕಾಗಿ ನಿನ್ನ ದುಷ್ಟತನ ವನ್ನು ಬಯಲಿಗೆ ತರಲಿಲ್ಲ; ಆದರೆ ನಿನಗಾಗಿ ಸುಳ್ಳಿನ ಭಾರಗಳನ್ನು ಮತ್ತು ಗಡೀಪಾರು ಮಾಡುವ ಕಾರಣ ಗಳನ್ನು ನೋಡಿದ್ದಾರೆ.
15 ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ?
16 ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ.
17 ಕರ್ತನು ತಾನು ಸಂಕಲ್ಪಿಸಿದ್ದನ್ನು ಮಾಡಿದ್ದಾನೆ; ಆತನು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತನ್ನ ವಾಕ್ಯವನ್ನು ಪೂರೈಸಿದ್ದಾನೆ. ಆತನು ಕೆಡವಿ ಕನಿಕರಿಸಲಿಲ್ಲ; ಆತನು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿ ಅವನ ಕೊಂಬನ್ನು ಎತ್ತಿದ್ದಾನೆ.
18 ಅವರ ಹೃದಯವು ಕರ್ತನ ಕಡೆಗೆ ಕೂಗಿ--ಓ ಚೀಯೋನಿನ ಮಗಳ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನೀನು ವಿಶ್ರಾಂತಿ ತಕ್ಕೊಳ್ಳಬೇಡ; ನಿನ್ನ ಕಣ್ಣು ರೆಪ್ಪೆಯನ್ನು ಮುಚ್ಚಬೇಡ.
19 ಎದ್ದೇಳು, ರಾತ್ರಿಯಲ್ಲಿ ಕೂಗು; ನಿನ್ನ ಹೃದಯವನ್ನು ಕರ್ತನ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ (ನೀರಿನಂತೆ) ಹೊಯ್ಯಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಯಾಕಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ.
20 ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?
21 ಎಳೇ ಪ್ರಾಯದವರೂ ಮುದುಕರೂ ಬೀದಿಗಳಲ್ಲಿ ಬಿದ್ದಿದ್ದಾರೆ; ನನ್ನ ಕನ್ಯೆಯರೂ ಯೌವನಸ್ಥರೂ ಕತ್ತಿಯಿಂದ ಹತರಾಗಿದ್ದಾರೆ; ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿ; ಕನಿಕರಿಸದೆ ಕೊಂದುಹಾಕಿ ಬಿಟ್ಟಿದ್ದೀ.
22 ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.
ಅಧ್ಯಾಯ 3

1 ಆತನ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.
2 ಆತನು ನನ್ನನ್ನು ಕರೆತಂದು ನಡಿಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ.
3 ನಿಶ್ಚಯವಾಗಿ ಆತನು ನನಗೆ ವಿರೋಧ ವಾಗಿ ತಿರುಗಿದ್ದಾನೆ ದಿನವೆಲ್ಲಾ ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾನೆ.
4 ಆತನು ನನ್ನ ಮಾಂಸ ಚರ್ಮವನ್ನೂ ಎಲುಬುಗಳನ್ನೂ ಮುರಿದಿದ್ದಾನೆ.
5 ಆತನು ನನಗೆ ವಿರೋಧವಾಗಿ ಕಟ್ಟಿದ್ದಾನೆ, ವಿಷದಿಂದಲೂ ಸಂಕಟದಿಂದಲೂ ಸುತ್ತಿಕೊಂಡಿದ್ದಾನೆ.
6 ಆತನು ನನ್ನನ್ನು ಬಹು ಕಾಲದ ಹಿಂದೆ ಸತ್ತವರ ಹಾಗೆ ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾನೆ.
7 ನಾನು ಹೊರಗೆ ಬಾರದ ಹಾಗೆ ಆತನು ನನ್ನ ಸುತ್ತಲೂ ಬೇಲಿ ಹಾಕಿದ್ದಾನೆ; ಆತನು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾನೆ.
8 ನಾನು ಮೊರೆಯಿಟ್ಟು ಕೂಗಿದರೂ ಆತನು ನನ್ನ ಪ್ರಾರ್ಥನೆ ಯನ್ನು ಲಾಲಿಸುವದಿಲ್ಲ.
9 ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ ಆತನು ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
10 ಆತನು ನನಗೆ ಹೊಂಚುಹಾಕುವ ಕರಡಿಯ ಹಾಗೆಯೂ ಗುಪ್ತಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾನೆ.
11 ಆತನು ನನ್ನ ಮಾರ್ಗಗಳನ್ನು ತಪ್ಪಿಸಿ ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ ಹಾಳುಮಾಡಿದ್ದಾನೆ.
12 ಆತನು ತನ್ನ ಬಿಲ್ಲನ್ನು ಬಗ್ಗಿಸಿದ್ದಾನೆ ಮತ್ತು ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾನೆ.
13 ಆತನು ತನ್ನ ಬತ್ತಳಿಕೆಯಲ್ಲಿನ ಬಾಣಗಳು ನನ್ನ ಅಂತರಂಗಗಳಲ್ಲಿ ತೂರಿಹೋಗುವ ಹಾಗೆ ಮಾಡಿ ದ್ದಾನೆ.
14 ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ ದಿನವೆಲ್ಲವೂ ಅವರ ಹಾಡಾಗಿಯೂ ಇದ್ದೇನೆ.
15 ಆತನು ನನ್ನನ್ನು ಕಹಿಯಿಂದ ತುಂಬಿಸಿ ಮಾಚಿ ಪತ್ರೆಯಿಂದ ನನ್ನನ್ನು ಅಮಲೇರಿಸಿದ್ದಾನೆ.
16 ಆತನು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು ನನ್ನನ್ನು ಬೂದಿಯಿಂದ ಮುಚ್ಚಿದ್ದಾನೆ.
17 ನನ್ನ ಪ್ರಾಣವನ್ನು ಸಮಾಧಾನದಿಂದ ದೂರಮಾಡಿದ್ದಾನೆ; ನಾನು ಏಳಿಗೆಯನ್ನು ಮರೆತುಬಿಟ್ಟೆನು.
18 ನನ್ನ ಬಲವೂ ನಿರೀಕ್ಷೆಯೂ ಕರ್ತನಿಂದ ನಾಶವಾದವೆಂದು ಹೇಳಿ
19 ನನ್ನ ಸಂಕಟವನ್ನು ಹಿಂಸೆಯನ್ನು ಮಾಚಿಪತ್ರೆಯನ್ನು ವಿಷವನ್ನು ಇವುಗಳನ್ನು ಜ್ಞಾಪಕಮಾಡಿಕೊಂಡೆನು.
20 ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿ ಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.
21 ಇದನ್ನು ನಾನು ನನ್ನ ಮನಸ್ಸಿಗೆ ತರುತ್ತೇನೆ, ಆದದರಿಂದ ನನಗೆ ನಿರೀಕ್ಷೆ ಇದೆ.
22 ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.
23 ಅವು ಪ್ರತಿ ಮುಂಜಾನೆಯೂ ಹೊಸದಾಗಿರುವವು; ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.
24 ಕರ್ತನೇ ನನ್ನ ಪಾಲೆಂದು ನನ್ನ ಪ್ರಾಣವು ಹೇಳುತ್ತದೆ, ಆದದರಿಂದ ನಾನು ಆತನಲ್ಲಿ ನಿರೀಕ್ಷೆ ಇಡುತ್ತೇನೆ.
25 ಕರ್ತನು ತನಗಾಗಿ ಕಾಯುವವನಿಗೂ ಹುಡುಕುವ ಪ್ರಾಣಕ್ಕೂ ಒಳ್ಳೆಯವನಾಗಿದ್ದಾನೆ.
26 ಮನುಷ್ಯನು ನಿರೀಕ್ಷೆಯಿಂದ ಮೌನವಾಗಿ ಕರ್ತನ ರಕ್ಷಣೆಗಾಗಿ ಕಾಯು ವದು ಒಳ್ಳೆಯದು.
27 ತನ್ನ ಯೌವನದಲ್ಲಿ ನೊಗವನ್ನು ಹೊರುವದು ಅವನಿಗೆ ಒಳ್ಳೆಯದು.
28 ಅವನು ಒಂಟಿಯಾಗಿ ಕೂತುಕೊಂಡು ಮೌನ ವಾಗಿರುವನು, ಯಾಕಂದರೆ ಆತನೇ ಅದನ್ನು ಅವನ ಮೇಲೆ ಹೊರಿಸಿದ್ದಾನೆ.
29 ಒಂದು ವೇಳೆ ಅಲ್ಲಿ ನಿರೀಕ್ಷೆ ಇರುವದಾದರೆ ಅವನು ತನ್ನ ಬಾಯಿ ಯನ್ನು ದೂಳಿನಲ್ಲಿ ಇಡುತ್ತಾನೆ.
30 ಆತನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡುತ್ತಾನೆ ಆತನು ನಿಂದೆಯಿಂದಲೇ ತುಂಬಿದ್ದಾನೆ.
31 ಕರ್ತನು ಎಂದೆಂದಿಗೂ ತಳ್ಳಿಬಿಡುವದಿಲ್ಲ;
32 ಆತನು ದುಃಖಪಡಿಸಿದರೂ ತನ್ನ ಕೃಪಾತಿಶಯದಿಂದ ಕನಿಕರಿಸುವನು.
33 ಆತನು ಇಷ್ಟಪೂರ್ವಕವಾಗಿ ಮನುಷ್ಯರ ಮಕ್ಕಳನ್ನು ಬಾಧಿಸುವದು ಇಲ್ಲ ದುಃಖಿಸು ವದೂ ಇಲ್ಲ.
34 ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವದನ್ನೂ
35 ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ತಿರುಗಿಸು ವದನ್ನೂ
36 ಮನುಷ್ಯನನ್ನು ಅವನ ವ್ಯಾಜ್ಯದಲ್ಲಿ ಕೆಡಿಸುವದನ್ನೂ ಕರ್ತನು ಮೆಚ್ಚುವದಿಲ್ಲ.
37 ಕರ್ತನು ಆಜ್ಞಾಪಿಸದಿರು ವಾಗ ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?
38 ಮಹೋನ್ನತನ ಬಾಯಿಂದ ಕೆಟ್ಟದ್ದೂ ಒಳ್ಳೆಯದೂ ಹೊರಡುವದಿಲ್ಲವೇ?
39 ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ?
40 ನಾವು ನಮ್ಮ ಮಾರ್ಗಗಳನ್ನು ಶೋಧಿಸಿ ಪರೀಕ್ಷಿಸಿ ಕೊಂಡು ಮತ್ತೆ ಕರ್ತನ ಬಳಿಗೆ ತಿರುಗಿಕೊಳ್ಳೋಣ.
41 ನಮ್ಮ ಹೃದಯವನ್ನು ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.
42 ನಾವು ದ್ರೋಹಮಾಡಿ ಎದುರು ಬಿದ್ದಿದ್ದೇವೆ; ನೀನು ಮನ್ನಿಸಲಿಲ್ಲ.
43 ಕೋಪದಲ್ಲಿ ನಮ್ಮನ್ನು ಮುಚ್ಚಿ, ಹಿಂಸಿಸಿದ್ದೀ; ಕನಿಕರಿಸದೆ ಕೊಂದುಹಾಕಿರುವಿ.
44 ನಮ್ಮ ಪ್ರಾರ್ಥ ನೆಯು ನಿನಗೆ ಮುಟ್ಟದಂತೆ ನಿನ್ನನ್ನು ಮೇಘದಿಂದ ಮುಚ್ಚಿ ಕೊಂಡಿದ್ದೀ.
45 ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ ಕಸವನ್ನಾಗಿಯೂ ಮಾಡಿದ್ದೀ.
46 ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
47 ಭಯವೂ ಬೋನೂ ನಾಶನವೂ ಸಂಹಾರವೂ ನಮ್ಮ ಮೇಲೆ ಬಂದಿವೆ.
48 ನನ್ನ ಜನರ ಕುಮಾರಿಯ ನಾಶನದ ನಿಮಿತ್ತವಾಗಿ ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದುಹೋಗುತ್ತದೆ.
49 ಕರ್ತನು ಕಟಾಕ್ಷಿಸಿ ಪರಲೋಕದಿಂದ ನೋಡುವ ತನಕ ನೇತ್ರವು ಎಡೆಬಿಡದೆ ಕಣ್ಣೀರು ಸುರಿಸುತ್ತದೆ;
50 ವಿಶ್ರಮಿಸಿಕೊಳ್ಳುವದೂ ಇಲ್ಲ.
51 ನನ್ನ ನಗರದ ಕುಮಾರ್ತೆಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣು ನನ್ನ ಹೃದಯವನ್ನು ಪೀಡಿಸಿದೆ.
52 ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.
53 ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.
54 ಪ್ರವಾಹವು ನನ ತಲೆಯ ಮೇಲೆ ಹರಿಯಿತು; ಆಗ--ನಾನು ಸತ್ತೆನು ಅಂದುಕೊಂಡೆನು.
55 ಓ ಕರ್ತನೇ, ನಾನು ಆಳವಾದ ಕಾರಾಗೃಹದಿಂದ ನಿನ್ನ ಹೆಸರನ್ನು ಎತ್ತಿ ಬೇಡಿಕೊಂಡೆನು.
56 ನೀನು ನನ್ನ ಸ್ವರವನ್ನು ಕೇಳಿದ್ದೀ; ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ.
57 ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸವಿಾಪಕ್ಕೆ ಬಂದು--ಭಯಪಡ ಬೇಡ ಎಂದು ಹೇಳಿದಿ.
58 ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ.
59 ಓ ಕರ್ತನೇ, ನೀನು ನನ್ನ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯವನ್ನು ತೀರಿಸು.
60 ಅವರ ಎಲ್ಲಾ ಪ್ರತೀಕಾರವನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನೀನು ನೋಡಿರುವಿ.
61 ಓ ಕರ್ತನೇ, ಅವರ ನಿಂದೆಯನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ
62 ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿ.
63 ಅವರು ಕೂಡ್ರುವದನ್ನೂ ಏಳುವದನ್ನೂ ನೋಡು; ನಾನೇ ಅವರಿಗೆ ಸಂಗೀತವಾಗಿದ್ದೇನೆ.
64 ಓ ಕರ್ತನೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡು.
65 ಅವರಿಗೆ ದುಃಖಕರವಾದ ಹೃದಯವನ್ನೂ ನಿನ್ನ ಶಾಪವನ್ನೂ ಕೊಡು.
66 ಕರ್ತನೇ ಆಕಾಶದ ಕೆಳಗಿರುವವರನ್ನು ನಿನ್ನ ಕೋಪದಿಂದ ಹಿಂಸಿಸಿ ಹಾಳುಮಾಡು.
ಅಧ್ಯಾಯ 4

1 ಬಂಗಾರವು ಹೇಗೆ ಮುಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧ ಸ್ಥಳದ ಕಲ್ಲುಗಳು ಪ್ರತಿಯೊಂದು ಬೀದಿಯ ಬದಿಯಲ್ಲಿ ಸುರಿಯಲ್ಪಟ್ಟಿವೆ.
2 ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಕುಮಾರರು ಹೇಗೆ ಮಣ್ಣಿನ ಪಾತ್ರೆಗಳಂತೆಯೂ ಕುಂಬಾರನ ಕೈಕೆಲಸದ ಹಾಗೆಯೂ ಎಣಿಸಲ್ಪಟ್ಟಿ ದ್ದಾರಲ್ಲಾ!
3 ಸಮುದ್ರದ ವಿಕಾರವಾದ ಪ್ರಾಣಿಗಳಾ ದರೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಮೊಲೆ ಕೊಡುತ್ತವೆ; ಆದರೆ ನನ್ನ ಜನರ ಮಗಳು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿ ದ್ದಾಳೆ.
4 ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ.
5 ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ.
6 ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ.
7 ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು.
8 ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.
9 ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ.
10 ಕನಿಕರ ತುಂಬಿದ ಹೆಂಗಸರ ಕೈಗಳು ಅವರ ಸ್ವಂತ ಮಕ್ಕಳನ್ನೇ ಬೇಯಿಸಿದವು; ಇವರು ನನ್ನ ಜನರ ಮಗಳ ನಾಶದಲ್ಲಿ ಅವರಿಗೆ ಆಹಾರ ವಾದರು.
11 ಕರ್ತನು ತನ್ನ ರೋಷವನ್ನು ತೀರಿಸಿ ದ್ದಾನೆ; ಆತನು ತನ್ನ ಉಗ್ರವಾದ ಕೋಪವನ್ನು ಸುರಿದಿದ್ದಾನೆ; ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು.
12 ಭೂ ರಾಜರೂ ವಿರೋಧಿಯೂ ಶತ್ರುವೂ ಯೆರೂಸಲೇ ಮಿನಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.
13 ಅವಳ ಪ್ರವಾದಿಗಳ ಪಾಪಗಳಿಗೋಸ್ಕರವೂ ಅವಳ ಯಾಜಕರ ಅಕ್ರಮಗಳಿ ಗೋಸ್ಕರವೂ ಹೀಗಾಯಿತು. ಯಾಕಂದರೆ ಇವರು ನೀತಿವಂತರ ರಕ್ತವನ್ನು ಅವಳ ಮಧ್ಯ ಚೆಲ್ಲಿದ್ದರು.
14 ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು, ಅವರು ರಕ್ತದಿಂದ ತಮ್ಮನ್ನು ತಾವೇ ಅಪವಿತ್ರಪಡಿಸಿ ಕೊಂಡರು; ಆದದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೆ ಹೋದರು.
15 ಅವರು ಜನರಿಗೆ--ನೀವು ಸರಿಯಿರಿ ಇದು ಅಶುದ್ಧವಾಗಿದೆ; ಸರಿಯಿರಿ, ಸರಿಯಿರಿ; ಮುಟ್ಟಬೇಡಿರಿ ಎಂದು ಕೂಗಿ ಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರು ವಾಗ--ಅವರು ಇನ್ನು ಮೇಲೆ ಅಲ್ಲಿ ವಾಸಮಾಡು ವದಿಲ್ಲ ಎಂದು ಅನ್ಯ ಜನಾಂಗಗಳೊಳಗೆ ಹೇಳಿದರು.
16 ಕರ್ತನ ಕೋಪವು ಅವರನ್ನು ವಿಭಾಗಿಸಿತು; ಆತನು ಇನ್ನು ಅವರನ್ನು ಲಕ್ಷಿಸುವದಿಲ್ಲ; ಅವರು ಯಾಜಕರನ್ನು ಗೌರವಿಸಲಿಲ್ಲ; ಅವರು ಹಿರಿಯರಿಗೆ ದಯೆತೋರಿ ಸಲಿಲ್ಲ.
17 ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು; ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.
18 ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಅವರು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ; ನಮ್ಮ ಅಂತ್ಯವು ಸವಿಾಪಿಸಿತು, ನಮ್ಮ ದಿನಗಳು ತುಂಬಿದವು; ನಮ್ಮ ಅಂತ್ಯವು ಬಂದಿತು.
19 ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರ ವಾಗಿದ್ದಾರೆ; ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ ಅರಣ್ಯದಲ್ಲಿ ಹೊಂಚುಹಾಕಿದರು.
20 ಯಾರ ವಿಷಯವಾಗಿ ನಾವು--ಅವನ ನೆರಳಿನ ಕೆಳಗೆ ಅನ್ಯ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿ ಕೊಂಡೆವೋ ನಮ್ಮ ಮೂಗಿನ ಉಸಿರಾದ ಆ ಕರ್ತನ ಅಭಿಷಿಕ್ತನು ಅವರ ಕುಣಿಗಳಲ್ಲಿ ಸಿಕ್ಕಿಕೊಂಡನು.
21 ಎದೋಮಿನ ಮಗಳೇ, ಊಚ್‌ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು, ಸಂತೋಷಪಡು; ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವದು, ನೀನು ಕುಡಿದು ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.
22 ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು.
ಅಧ್ಯಾಯ 5

1 ಓ ಕರ್ತನೇ, ನನ್ನ ಮೇಲೆ ಬಂದ ದುರ್ಗತಿಯನ್ನು ಜ್ಞಾಪಕಮಾಡಿಕೋ ಪರಿಗಣಿಸು, ನಮ್ಮ ನಿಂದೆಯನ್ನು ನೋಡು.
2 ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ ನಮ್ಮ ಮನೆಗಳು ಅನ್ಯರಿಗೂ ವಶ ವಾದವು.
3 ನಾವು ಅನಾಥರು ತಂದೆ ಇಲ್ಲದವರು, ನಮ್ಮ ತಾಯಿಂದಿರು ವಿಧವೆಯರು.
4 ನಾವು ನಮ್ಮ ನೀರನ್ನು ಹಣ ಕೊಟ್ಟು ಕುಡಿದಿದ್ದೇವೆ, ನಮ್ಮ ಸೌದೆಯು ನಮಗೆ ಮಾರಲ್ಪಟ್ಟಿದೆ.
5 ನಮ್ಮ ಕುತ್ತಿಗೆಗಳು ಹಿಂಸೆಗೊಳ ಗಾದವು; ನಾವು ವಿಶ್ರಾಂತಿಯಿಲ್ಲದೆ ಕಷ್ಟಪಡುತ್ತೇವೆ.
6 ರೊಟ್ಟಿಯಿಂದ ತೃಪ್ತಿಪಡುವದಕ್ಕಾಗಿ ನಮ್ಮ ಕೈಯನ್ನು ಐಗುಪ್ತ್ಯರಿಗೂ ಅಶ್ಶೂರ್ಯರಿಗೂ ಕೊಟ್ಟಿದ್ದೇವೆ.
7 ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
8 ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.
9 ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
10 ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
11 ಅವರು ಚೀಯೋನಿನಲ್ಲಿ ಹೆಂಗಸರನ್ನೂ ಯೆಹೂದದ ನಗರಗಳಲ್ಲಿ ಕನ್ಯೆಯರನ್ನೂ ಕೆಡಿಸಿದರು.
12 ಪ್ರಭುಗಳು ಅವರ ಕೈಯಿಂದ ಗಲ್ಲಿಗೇರಿಸಲ್ಪಟ್ಟರು; ಹಿರಿಯರ ಮುಖಗಳು ಗೌರವಿ ಸಲ್ಪಡಲಿಲ್ಲ.
13 ಅವರು ಯೌವನಸ್ಥರನ್ನು ಅರೆಯು ವದಕ್ಕೆ ತೆಗೆದುಕೊಂಡರು; ಮಕ್ಕಳು ಕಟ್ಟಿಗೆಯ ಕೆಳಗೆ ಬಿದ್ದರು.
14 ಹಿರಿಯರು ಬಾಗಿಲನ್ನು ಪ್ರವೇಶಿಸುವದೂ ಯೌವನಸ್ಥರು ಸಂಗೀತವನ್ನು ಹಾಡುವದೂ ನಿಂತು ಹೋಯಿತು.
15 ನಮ್ಮ ಹೃದಯದ ಸಂತೋಷವು ನಿಂತುಹೋಯಿತು; ನಮ್ಮ ನಾಟ್ಯವು ದುಃಖದ ಕಡೆಗೆ ತಿರುಗಿತು.
16 ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.
17 ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
18 ಚೀಯೋನ್‌ ಪರ್ವತವು ಹಾಳಾಗಿರು ವದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡು ವವು.
19 ಓ ಕರ್ತನೇ, ನೀನು ಎಂದೆಂದಿಗೂ ಇರುತ್ತೀ. ನಿನ್ನ ಸಿಂಹಾಸನವು ತಲತಲಾಂತರಗಳ ವರೆಗೂ ಇರು ವದು.
20 ಆದಕಾರಣ ನೀನು ನಮ್ಮನ್ನು ಮರೆಯು ವದೇಕೆ? ಯಾಕೆ ನಮ್ಮನ್ನು ಇಷ್ಟು ಕಾಲ ಕೈಬಿಟ್ಟಿದ್ದೀ?
21 ಕರ್ತನೇ, ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ಆಗ ನಾವು ತಿರುಗಿಕೊಳ್ಳುವೆವು, ಹಳೆಯ ದಿನಗಳ ಹಾಗೆ ನಮ್ಮ ದಿನಗಳನ್ನು ನೂತನಮಾಡು.
22 ಆದರೆ ನಮ್ಮನ್ನು ಪೂರ್ಣವಾಗಿ ತಳ್ಳಿಬಿಟ್ಟಿರುವಿ; ನಮಗೆ ವಿರುದ್ಧವಾಗಿ ನೀನು ಬಹಳ ಕೋಪಗೊಂಡಿರುವಿ.