ಯೋನ

1 2 3 4


ಅಧ್ಯಾಯ 1

1 ಕರ್ತನ ವಾಕ್ಯವು ಅಮಿತ್ತೈಯನ ಮಗನಾದ ಯೋನನಿಗೆ ಉಂಟಾಯಿತು.
2 ಹೇಗಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದಕ್ಕೆ ವಿರೋಧವಾಗಿ ಕೂಗು; ಅವರ ಕೆಟ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ ಎಂಬದು.
3 ಆದರೆ ಯೋನನು ಕರ್ತನ ಸಮ್ಮುಖದಿಂದ ತಾರ್ಷೀಷಿಗೆ ಓಡಿ ಹೋಗುವದಕ್ಕೆ ಎದ್ದು ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು ಅದರ ಪ್ರಯಾಣದ ತೆರವನ್ನು ಕೊಟ್ಟು ಕರ್ತನ ಸಮ್ಮುಖದಿಂದ ಅವರ ಸಂಗಡ ತಾರ್ಷಿಷಿಗೆ ಹೋಗುವದಕ್ಕೆ ಅದನ್ನು ಹತ್ತಿದನು.
4 ಆದರೆ ಕರ್ತನು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದನು; ಸಮುದ್ರದಲ್ಲಿ ಮಹಾಬಿರುಗಾಳಿ ಉಂಟಾಗಿ ಹಡಗು ಒಡೆಯುವ ದಕ್ಕಿತ್ತು.
5 ಆಗ ಹಡಗಿನವರು ಭಯಪಟ್ಟು ಒಬ್ಬೊಬ್ಬನು ತನ್ನ ತನ್ನ ದೇವರಿಗೆ ಕೂಗಿ ಹಡಗನ್ನು ಹಗುರ ಮಾಡುವ ಹಾಗೆ ಅದರಲ್ಲಿದ್ದ ಸಾಮಾನುಗಳನ್ನು ಸಮುದ್ರದಲ್ಲಿ ಹಾಕಿಬಿಟ್ಟರು; ಆದರೆ ಯೋನನು ಹಡಗಿನ ಒಳಗೆ ಇಳಿದುಹೋಗಿ ಮಲಗಿಕೊಂಡು ಗಾಢ ನಿದ್ರೆಯಲ್ಲಿ ದ್ದನು.
6 ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.
7 ಇದಲ್ಲದೆ ಅವರು ಒಬ್ಬರಿಗೊ ಬ್ಬರು--ಬನ್ನಿ, ಚೀಟುಗಳನ್ನು ಹಾಕೋಣ; ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟು ಗಳನ್ನು ಹಾಕಿದಾಗ ಯೋನನ ಮೇಲೆ ಚೀಟು ಬಿತ್ತು.
8 ಆಗ ಅವರು ಅವನಿಗೆ--ಯಾವದರ ನಿಮಿತ್ತ ಈ ಕೇಡು ನಮಗೆ ಬಂತು, ನಿನ್ನ ಕೆಲಸವೇನು, ಎಲ್ಲಿಂದ ಬಂದಿ,
9 ನಿನ್ನ ದೇಶ ಯಾವದು, ನೀನು ಯಾವ ಜನಾಂಗದವನು, ನಮಗೆ ತಿಳಿಸು ಅಂದರು. ಅವನು ಅವರಿಗೆ--ನಾನು ಇಬ್ರಿಯನು; ಸಮುದ್ರವನ್ನೂ ಒಣಗಿದ ಭೂಮಿಯನ್ನೂ ಉಂಟುಮಾಡಿದ ಪರ ಲೋಕದ ದೇವರಾದ ಕರ್ತನಿಗೆ ಭಯಪಡುವವ ನಾಗಿದ್ದೇನೆಂದು ಹೇಳಿದನು.
10 ಆಗ ಆ ಮನುಷ್ಯರು ಬಹಳ ಭಯಪಟ್ಟು--ಇದನ್ನು ಯಾಕೆ ಮಾಡಿದ್ದೀ ಎಂದು ಅವನಿಗೆ ಹೇಳಿದರು, ಕರ್ತನ ಸಮ್ಮುಖದಿಂದ ಓಡಿ ಹೋಗುತ್ತಾನೆಂದು ಆ ಮನುಷ್ಯರಿಗೆ ತಿಳಿದಿತ್ತು; ಅವನು ಅವರಿಗೆ ಹೇಳಿದ್ದನು.
11 ಆಗ ಅವರು ಅವನಿಗೆ--ಸಮುದ್ರವು ನಮಗೆ ಶಾಂತವಾಗುವ ಹಾಗೆ ನಿನಗೆ ಏನು ಮಾಡಬೇಕು? ಯಾಕಂದರೆ ಸಮುದ್ರವು ಹೆಚ್ಚಾಗಿ ಉಬ್ಬುತ್ತಾ ಬರುತ್ತಿದೆ ಅಂದರು.
12 ಅವನು ಅವ ರಿಗೆ--ನನ್ನನ್ನು ಎತ್ತಿ ಸಮುದ್ರದಲ್ಲಿ ಹಾಕಿರಿ, ಆಗ ಸಮುದ್ರವು ನಿಮಗೆ ಶಾಂತವಾಗುವದು; ನನ್ನ ನಿಮಿತ್ತ ಈ ದೊಡ್ಡ ಬಿರುಗಾಳಿ ನಿಮ್ಮ ಮೇಲೆ ಬಂತೆಂದು ಬಲ್ಲೆನು ಅಂದನು.
13 ಆದರೂ ಆ ಮನುಷ್ಯರು ದಡಕ್ಕೆ ತಿರುಗಿಕೊಳ್ಳುವ ಹಾಗೆ ಬಲವಾಗಿ ಹುಟ್ಟು ಹಾಕಿದರು; ಆದರೆ ಅವರಿಂದಾಗದೆ ಹೋಯಿತು. ಸಮುದ್ರವು ಅವರಿಗೆ ಎದುರಾಗಿ ಹೆಚ್ಚೆಚ್ಚಾಗಿ ಉಬ್ಬುತ್ತಾ ಬಂತು.
14 ಆದದರಿಂದ ಅವರು ಕರ್ತನಿಗೆ ಕೂಗಿ ಹೇಳಿದ್ದೇನಂದರೆ--ಓ ಕರ್ತನೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ; ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡ; ಓ ಕರ್ತನೇ, ನೀನು ನಿನ್ನ ಚಿತ್ತಕ್ಕೆ ಬಂದ ಹಾಗೆ ಮಾಡಿದ್ದೀ ಅಂದರು.
15 ಆಗ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು; ಆಗ ಸಮುದ್ರವು ತನ್ನ ಉಗ್ರವನ್ನು ನಿಲ್ಲಿಸಿ ಬಿಟ್ಟಿತು.
16 ಆ ಮನುಷ್ಯರು ಯೆಹೋವನಿಗೆ ಬಹಳ ವಾಗಿ ಭಯಪಟ್ಟು ಕರ್ತನಿಗೆ ಬಲಿ ಅರ್ಪಿಸಿ ಪ್ರಮಾಣ ಗಳನ್ನು ಮಾಡಿಕೊಂಡರು.
17 ಆದರೆ ಕರ್ತನು ಯೋನನನ್ನು ನುಂಗುವ ಹಾಗೆ ದೊಡ್ಡ ವಿಾನನ್ನು ಸಿದ್ಧಮಾಡಿದ್ದನು; ಯೋನನು ಆ ವಿಾನಿನ ಹೊಟ್ಟೆಯಲ್ಲಿ ಮೂರು ಹಗಲು ಮೂರು ರಾತ್ರಿಯು ಇದ್ದನು.
ಅಧ್ಯಾಯ 2

1 ಆಗ ಯೋನನು ವಿಾನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--
2 ನಾನು ನನ್ನ ವ್ಯಥೆಯ ದೆಸೆಯಿಂದ ಕರ್ತನಿಗೆ ಮೊರೆಯಿಟ್ಟೆನು; ಆತನು ನನ್ನ ಕೂಗನ್ನು ಕೇಳಿದನು; ನರಕದ ಹೊಟ್ಟೆ ಯೊಳಗಿಂದ ನಾನು ಕೂಗಿದೆನು, ಆಗ ನನ್ನ ಶಬ್ದವನ್ನು ನೀನು ಕೇಳಿದಿ.
3 ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು.
4 ಆಗ ನಾನು ಹೇಳಿದ್ದು--ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು.
5 ನೀರು ಗಳು ಪ್ರಾಣದ ಮಟ್ಟಿಗೂ ನನ್ನನ್ನು ಸುತ್ತಿಕೊಂಡವು; ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು; ಆಪುಗಳು ನನ್ನ ತಲೆಯನ್ನು ಸುತ್ತಿಕೊಂಡಿದ್ದವು.
6 ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
7 ನನ್ನ ಪ್ರಾಣವು ನನ್ನಲ್ಲಿ ಕುಂದಿಹೋದಾಗ ಕರ್ತನನ್ನು ಜ್ಞಾಪಕ ಮಾಡಿಕೊಂಡೆನು; ನನ್ನ ಪ್ರಾರ್ಥನೆಯು ನಿನ್ನ ಬಳಿಗೆ ನಿನ್ನ ಪರಿಶುದ್ಧ ಮಂದಿರದೊಳಗೆ ಬಂತು.
8 ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
9 ಆದರೆ ನಾನು ಸ್ತೋತ್ರದ ಸ್ವರದಿಂದ ನಿನಗೆ ಬಲಿಅರ್ಪಿಸು ವೆನು; ನಾನು ಮಾಡಿದ ಪ್ರಮಾಣವನ್ನು ತೀರಿಸುವೆನು; ರಕ್ಷಣೆಯು ಕರ್ತನದೇ ಎಂದು ಹೇಳಿದನು.
10 ಆಗ ಕರ್ತನು ಆ ವಿಾನಿಗೆ ಹೇಳಿದ್ದರಿಂದ ಅದು ಯೋನನನ್ನು ಒಣ ಭೂಮಿಯ ಮೇಲೆ ಕಾರಿಬಿಟ್ಟಿತು.
ಅಧ್ಯಾಯ 3

1 ಕರ್ತನ ವಾಕ್ಯವು ಎರಡನೇ ಸಾರಿ ಯೋನನಿಗೆ ಉಂಟಾಯಿತು,
2 ಏನಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಹೇಳಿದ ಪ್ರಕಟನೆಯನ್ನು ಅದಕ್ಕೆ ಸಾರು ಎಂದು ಹೇಳಿದನು.
3 ಹೀಗೆ ಯೋನನು ಎದ್ದು ಕರ್ತನ ವಾಕ್ಯದ ಪ್ರಕಾರ ನಿನೆವೆಗೆ ಹೋದನು; ಆ ನಿನೆವೆಯು ಮೂರು ದಿವಸದ ಪ್ರಯಾಣವಾದ ಮಹಾದೊಡ್ಡ ಪಟ್ಟಣ ವಾಗಿತ್ತು.
4 ಆಗ ಯೋನನು ಒಂದು ದಿನದ ಪ್ರಯಾಣ ಮಾಡಿ ಪಟ್ಟಣದಲ್ಲಿ ಪ್ರವೇಶಿಸಲಾರಂಭಿಸಿ--ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ಕೆಡವಲ್ಪಡು ವದೆಂದು ಕೂಗಿ ಹೇಳಿದನು.
5 ಆಗ ನಿನೆವೆಯ ಮನು ಷ್ಯರು ದೇವರನ್ನು ನಂಬಿ ಉಪವಾಸವನ್ನು ಸಾರಿ ಅವ ರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನ ವರೆಗೂ ಗೋಣೀತಟ್ಟನ್ನು ಉಟ್ಟುಕೊಂಡರು.
6 ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ ಅವನು ತನ್ನ ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದಿಟ್ಟು ಗೋಣೀತಟ್ಟನ್ನು ಉಟ್ಟುಕೊಂಡು ಬೂದಿ ಯಲ್ಲಿ ಕೂತು ಕೊಂಡನು.
7 ಅವನು ಅರಸನಿಂದಲೂ ತನ್ನ ಶ್ರೇಷ್ಠರಿಂದಲೂ ಆದ ನಿರ್ಣಯವನ್ನು ನಿನೆವೆ ಯಲ್ಲಿ ಸಾರಿ ಹೇಳಿದ್ದೇನಂದರೆ--ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನಾ ದರೂ ರುಚಿ ನೋಡದಿರಲಿ, ಮೇಯ ದಿರಲಿ, ನೀರನ್ನು ಕುಡಿಯದಿರಲಿ, ಮನುಷ್ಯರೂ ಮೃಗಗಳೂ ಗೋಣೀ ತಟ್ಟು ಹಾಕಿಕೊಂಡು ಬಲವಾಗಿ ದೇವರಿಗೆ ಮೊರೆಯಿ ಡಲಿ;
8 ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ.
9 ದೇವರು ತಿರುಗಿ ಕೊಂಡು ಪಶ್ಚಾತ್ತಾಪಪಟ್ಟು ನಾವು ನಾಶವಾಗದ ಹಾಗೆ ತನ್ನ ಕೋಪದ ಉರಿಯನ್ನು ಬಿಟ್ಟಾನೇನೋ ಯಾರು ಬಲ್ಲರು ಅಂದನು.
10 ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.
ಅಧ್ಯಾಯ 4

1 ಆದರೆ ಅದು ಯೋನನಿಗೆ ತುಂಬಾಕರೆಕರೆಯಾಗಿ ಅವನಿಗೆ ಬಹು ಕೋಪ ಬಂತು.
2 ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಓ ಕರ್ತನೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನೇ ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು; ನೀನು ಕರುಣೆಯೂ ಕನಿಕರವೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳದೇವರೆಂದೂ ಕೇಡಿನ ವಿಷಯವಾಗಿ ಪಶ್ಚಾತ್ತಾಪ ಪಡುವಾತನೆಂದೂ ನನಗೆ ತಿಳಿದಿತ್ತು.
3 ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.
4 ಆಗ ಕರ್ತನು -- ನೀನು ಕೋಪಮಾಡಿಕೊಳ್ಳುವದು ಒಳ್ಳೇದೋ ಎಂದು ಅವನಿಗೆ ಹೇಳಿದನು.
5 ಆಗ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣ ಕಡೆಯಲ್ಲಿ ಕೂತುಕೊಂಡು ಗುಡಿಸಲನ್ನು ಮಾಡಿಕೊಂಡು ಪಟ್ಟಣದಲ್ಲಿ ಏನಾಗುವದೆಂದು ನೋಡುವ ವರೆಗೆ ಅದರ ನೆರಳಿನಲ್ಲಿ ಕೂತುಕೊಂಡನು.
6 ದೇವರಾದ ಕರ್ತನು ಒಂದು ಸೋರೇ ಗಿಡವನ್ನು ಎಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು ಅವನ ತಲೆಯ ಮೇಲೆ ನೆರಳುಕೊಟ್ಟು ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದನು: ಯೋನನು ಆ ಸೋರೇ ಗಿಡದ ವಿಷಯವಾಗಿ ಬಹಳ ಸಂತೋಷಪಟ್ಟನು.
7 ಆದರೆ ಮಾರನೇ ದಿನದಲ್ಲಿ ಉದಯವಾದಾಗ ದೇವರು ಒಂದು ಹುಳವನ್ನು ಸಿದ್ಧಮಾಡಿದನು; ಅದು ಸೋರೇ ಗಿಡವನ್ನು ಒಣಗುವ ಹಾಗೆ ಹೊಡೆಯಿತು.
8 ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.
9 ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.
10 ಆಗ ಕರ್ತನು ಹೇಳಿದ್ದೇನಂದರೆ--ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶನವಾದಂಥ,
11 ಆ ಸೋರೇಗಿಡದ ಮೇಲೆ ಕನಿಕರ ಪಟ್ಟಿಯಲ್ಲಾ, ಹಾಗಾ ದರೆ ಎಡ ಬಲ ಕೈಗಳನ್ನು ತಿಳಿಯದವರಾದ ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು, ಬಹಳ ದನ ಗಳು ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆ ಯನ್ನು ನಾನು ಕನಿಕರಿಸಬಾರದೋ ಅಂದನು.