ಇಬ್ರಿಯರಿಗೆ

1 2 3 4 5 6 7 8 9 10 11 12 13


ಅಧ್ಯಾಯ 1

1 ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು
2 ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ತನ್ನ ಮಗನ ಮುಖಾಂತರ ಮಾತನಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಲೋಕಗಳನ್ನು ಉಂಟು ಮಾಡಿದನು.
3 ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
4 ಈತನು ದೂತರಿಗಿಂತಲೂ ಉತ್ತಮನಾಗಿ ಮಾಡ ಲ್ಪಟ್ಟು ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನಲ್ಲಾ;
5 ಹೇಗೆಂದರೆ--ನೀನು ನನ್ನ ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ ಎಂತಲೂ ತಿರಿಗಿ--ನಾನು ಅವನಿಗೆ ತಂದೆಯಾಗಿ ರುವೆನು; ಅವನು ನನಗೆ ಮಗನಾಗಿರುವನು ಎಂತಲೂ ಆತನು ತನ್ನ ದೂತರೊಳಗೆ ಯಾರಿಗಾದರೂ ಎಂದಾ ದರೂ ಹೇಳಿದ್ದುಂಟೋ?
6 ಇದಲ್ಲದೆ ದೇವರು ಮೊದಲು ಹುಟ್ಟಿದಾತನನ್ನು ಲೋಕದೊಳಗೆ ಬರ ಮಾಡುವಾಗ--ದೇವದೂತರೆಲ್ಲರೂ ಆತನನ್ನು ಆರಾಧಿಸಲಿ ಎಂದು ಹೇಳುತ್ತಾನೆ.
7 ದೂತರ ವಿಷಯ ದಲ್ಲಿ ಆತನು ಹೇಳುವದೇನಂದರೆ--ದೇವರು ತನ್ನ ದೂತರನ್ನು ಆತ್ಮಗಳಾಗಿಯೂ ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ ಎಂಬದು.
8 ಮಗನ ವಿಷಯದಲ್ಲಿಯಾದರೋ--ಓ ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು; ನೀತಿದಂಡವೇ ನಿನ್ನ ರಾಜದಂಡವಾಗಿದೆ.
9 ನೀನು ನೀತಿಯನ್ನು ಪ್ರೀತಿಸಿದ್ದೀ, ದುಷ್ಠತನವನ್ನು ದ್ವೇಷಿಸಿದ್ದೀ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಮಿಗಿಲಾಗಿ ಆನಂದದ ತೈಲದಿಂದ ಅಭಿಷೇಕಿಸಿದ್ದಾನೆಂತಲೂ
10 ಕರ್ತನೇ, ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ, ಆಕಾಶಗಳು ನಿನ್ನ ಕೈಕೆಲಸಗಳಾಗಿವೆ.
11 ಅವು ನಾಶವಾಗುವವು; ಆದರೆ ನೀನು ಇರುವಾತನಾಗಿದ್ದೀ; ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು;
12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ; ಅವು ಮಾರ್ಪಡುವವು; ನೀನಾದರೋ ಏಕ ರೀತಿಯಾಗಿದ್ದೀ; ನಿನ್ನ ವರುಷಗಳು ಮುಗಿದು ಹೋಗುವದಿಲ್ಲ ಎಂತಲೂ ಹೇಳುತ್ತಾನೆ.
13 ಆದರೆ ದೂತರಲ್ಲಿ ಯಾವನ ವಿಷಯ ದಲ್ಲಿಯಾದರೂ--ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂಬದಾಗಿ ಎಂದಾದರೂ ಹೇಳಿ ದ್ದಾನೋ?
14 ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿ ಸಲ್ಪಟ್ಟ ಊಳಿಗದ ಆತ್ಮಗಳಲ್ಲವೋ?
ಅಧ್ಯಾಯ 2

1 ಆದದರಿಂದ ನಾವು ಕೇಳಿದ ಸಂಗತಿಗಳಿಗೆ ಯಾವಾಗಲಾದರೂ ಜಾರಿ ಹೋದೇ ವೆಂದು ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿ ರತಕ್ಕದ್ದು.
2 ಯಾಕಂದರೆ ದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ವಿಾರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯ ವಾದ ಪ್ರತಿಫಲ ಹೊಂದಿದ ಮೇಲೆ
3 ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲಾರಂಭಿಸಿತು. ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು.
4 ದೇವರು ಸಹ ಅವರ ಕೈಯಿಂದ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯ ಗಳನ್ನೂ ನಾನಾವಿಧವಾದ ಮಹತ್ಕಾರ್ಯಗಳನ್ನೂ ನಡಿಸಿ ತನ್ನ ಸ್ವಂತ ಚಿತ್ತಾನುಸಾರವಾಗಿ ಪವಿತ್ರಾತ್ಮ ದಾನಗಳಿಂದ ಅವರಿಗೆ ಸಾಕ್ಷಿ ಕೊಡುತ್ತಿದ್ದನು.
5 ನಾವು ಪ್ರಸ್ತಾಪಿಸುವ ಬರುವ ಆ ಲೋಕವನ್ನು ಆತನು ದೂತರಿಗೆ ಅಧೀನ ಮಾಡಲಿಲ್ಲವಲ್ಲಾ.
6 ಆದರೆ ಒಬ್ಬನು ಒಂದಾನೊಂದು ಸ್ಥಳದಲ್ಲಿ--ಮನುಷ್ಯನು ಎಷ್ಟು ಮಾತ್ರದವನು? ಅವನನ್ನು ನೀನು ಯಾಕೆ ನೆನಸಬೇಕು? ಇಲ್ಲವೆ ನರಪುತ್ರನು ಎಷ್ಟರವನು? ಅವನನ್ನು ಯಾಕೆ ದರ್ಶಿಸಬೇಕು?
7 ನೀನು ಅವನನ್ನು ದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದಿಯಲ್ಲಾ; ಪ್ರಭಾವ ವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟು ನಿನ್ನ ಕೈಕೆಲಸಗಳ ಮೇಲೆ ಅವನನ್ನು ನೇಮಿಸಿದ್ದೀ;
8 ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ ಎಂದು ಸಾಕ್ಷಿ ಹೇಳಿದನು; ಆತನು ಎಲ್ಲವನ್ನೂ ಮನುಷ್ಯನಿಗೆ ಅಧೀನಮಾಡಿದ ನೆಂಬದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ; ಆದರೆ ಎಲ್ಲವೂ ಅವನಿಗೆ ಅಧೀನವಾಗಿರು ವದನ್ನು ನಾವು ಇನ್ನೂ ಕಾಣುವದಿಲ್ಲ.
9 ಆದರೂ ದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ; ಆತನು ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು; ಆತನು ದೇವರ ಕೃಪೆ ಯಿಂದ ಎಲ್ಲರಿಗೋಸ್ಕರ ಮರ
10 ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.
11 ಯಾಕಂದರೆ ಪವಿತ್ರ ಮಾಡುವಾತನೂ ಪವಿತ್ರರಾದವರೆಲ್ಲರೂ ಒಬ್ಬಾತನಿಗೆ ಸಂಬಂಧಪಟ್ಟವರಾಗಿದ್ದಾರೆ. ಈ ಕಾರಣದಿಂದ ಆತನು ಅವರನ್ನು ಸಹೋದರರೆಂದು ಕರೆಯುವದಕ್ಕೆ ನಾಚಿಕೆ ಪಡದೆ--
12 ನಿನ್ನ ನಾಮವನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿ ಪದಗಳನ್ನು ಹಾಡುವೆನು ಎಂತಲೂ
13 ನಾನು ಆತನ ಮೇಲೆ ಭರವಸವಿಡುವೆನು ಎಂತಲೂ ತಿರಿಗಿ--ಇಗೋ, ನಾನೂ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಎಂತಲೂ ಹೇಳುತ್ತಾನೆ.
14 ಇದಲ್ಲದೆ ಮಕ್ಕಳು ರಕ್ತಮಾಂಸಗಳಲ್ಲಿ ಪಾಲುಗಾರರಾದದರಿಂದ ಆತನು ಸಹ ಅವರಂತೆಯೇ ಆದನು; ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶ ಮಾಡುವದಕ್ಕೂ
15 ಮರಣ ಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಗಳಲ್ಲಿ ಭಾಗ ವಹಿಸಿದನು.
16 ಆತನು ನಿಜವಾಗಿಯೂ ದೂತರ ಸ್ವಭಾವವನ್ನು ಧರಿಸಿಕೊಳ್ಳದೆ ಅಬ್ರಹಾಮನ ಸಂತತಿಯ ಸ್ವಭಾವವನ್ನು ಧರಿಸಿಕೊಂಡನು.
17 ಆದದರಿಂದ ಆತನು ಎಲ್ಲವುಗಳಲ್ಲಿ ತನ್ನ ಸಹೋದರರಿಗೆ ಸಮಾನ ವಾಗಿ ಮಾಡಲ್ಪಟ್ಟನು. ಹೀಗೆ ಆತನು ಜನರ ಪಾಪಗಳಿ ಗೋಸ್ಕರ ಶಾಂತಿ ಮಾಡುವದಕ್ಕೆ ದೇವರ ಕಾರ್ಯ ಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು.
18 ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.
ಅಧ್ಯಾಯ 3

1 ಆದದರಿಂದ ಪರಿಶುದ್ಧರಾದ ಸಹೋ ದರರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಒಪ್ಪಿಕೊಂಡಿರುವ ಅಪೊ ಸ್ತಲನೂ ಮಹಾಯಾಜಕನೂ ಆಗಿರುವ ಕ್ರಿಸ್ತ ಯೇಸುವನ್ನು ಆಲೋಚಿಸಿರಿ.
2 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತ ನಾಗಿದ್ದಂತೆಯೇ ಈತನೂ ತನ್ನನ್ನು ನೇಮಿಸಿದಾತನಿಗೆ ನಂಬಿಗಸ್ತನಾಗಿದ್ದಾನೆ.
3 ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವದರಿಂದ ಮೋಶೆಗಿಂತ ಈತನು (ಕ್ರಿಸ್ತ ಯೇಸು) ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸ ಲ್ಪಟ್ಟಿದ್ದಾನೆ.
4 ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ.
5 ನಿಜವಾಗಿಯೂ ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು; ಅವನು ಮುಂದೆ ಪ್ರಕಟವಾಗಬೇಕಾಗಿದ್ದವುಗಳಿಗೆ ಸಾಕ್ಷಿಯಾಗಿ ದ್ದನು.
6 ಕ್ರಿಸ್ತನಾದರೋ ಮಗನಾಗಿ ತನ್ನ ಸ್ವಂತ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ; ನಾವು ನಮ್ಮ ಧೈರ್ಯ ವನ್ನೂ ನಮ್ಮ ನಿರೀಕ್ಷೆಯಿಂದುಂಟಾಗುವ ಉತ್ಸಾಹವನ್ನೂ ಕಡೇತನಕ ದೃಢವಾಗಿ ಹಿಡುಕೊಂಡವರಾದರೆ ನಾವೇ ಆತನ ಮನೆಯಾಗಿದ್ದೇವೆ.
7 ಆದದರಿಂದ(ಪವಿತ್ರಾತ್ಮನು ಹೇಳುವ ಪ್ರಕಾರ--ನೀವು ಈ ದಿನ ದೇವರ ಶಬ್ದಕ್ಕೆ ಕಿವಿಗೊಟ್ಟರೆ
8 ಅರಣ್ಯ ದಲ್ಲಿದ್ದಾಗ ಶೋಧನೆಯ ದಿನದಲ್ಲಿ ದೇವರಿಗೆ ಕೋಪ ವನ್ನೆಬ್ಬಿಸಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿ ಕೊಳ್ಳಬೇಡಿರಿ.
9 ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ ದರು, ನನ್ನನ್ನು ಪರೀಕ್ಷಿಸಿದರು, ನಾಲ್ವತ್ತು ವರುಷ ನನ್ನ ಕಾರ್ಯಗಳನ್ನು ನೋಡಿದರು.
10 ಆದದರಿಂದ ನಾನು ಆ ಸಂತತಿಯವರ ಮೇಲೆ ಬಹಳವಾಗಿ ಸಂತಾಪಗೊಂಡು--ಅವರು ಯಾವಾ ಗಲೂ ಹೃದಯದಲ್ಲಿ ತಪ್ಪಿಹೋಗುತ್ತಾರೆ ಎಂದು ಹೇಳಿದನು. ಅವರು ನನ್ನ ಮಾರ್ಗಗಳನ್ನು ತಿಳ್ಳುಕೊಳ್ಳ ಲಿಲ್ಲ.
11 ಹೀಗಿರಲು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು ಎಂದು ಆತನು ಹೇಳಿದ್ದಾನೆ).
12 ಸಹೋದರರೇ, ಎಚ್ಚರಿಕೆಯಿಂದ ನೋಡಿಕೊ ಳ್ಳಿರಿ; ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು.
13 ನಿಮ್ಮಲ್ಲಿ ಒಬ್ಬ ರಾದರೂ ಪಾಪದಿಂದ ಮೋಸಹೋಗಿ ಕಠಿಣರಾಗ ದಂತೆ--ಈ ದಿನ ಎಂದು ಕರೆಯಲ್ಪಡುವಾಗಲೇ ಪ್ರತಿ ನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.
14 ಮೊದಲಿ ನಿಂದಿರುವ ನಮ್ಮ ಭರವಸವನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡುಕೊಳ್ಳು ವದಾದರೆ ಕ್ರಿಸ್ತನಲ್ಲಿ ಪಾಲುಗಾರಾಗಿದ್ದೇವಲ್ಲಾ!
15 ಈ ಹೊತ್ತು ನೀವು ಆತನ ಧ್ವನಿಯನ್ನು ಕೇಳಿದರೆ ಎಂದು ಹೇಳುವಾಗ (ನಿಮ್ಮ ಹಿರಿಯರು) ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದಯ ಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
16 ಕೆಲವರು ಆತನು ನುಡಿದದ್ದನ್ನು ಕೇಳಿದಾಗ ಕೋಪವ ನ್ನೆಬ್ಬಿಸಿದರು; ಆದಾಗ್ಯೂ ಮೋಶೆಯ ಮೂಲಕ ಐಗುಪ್ತದಿಂದ ಬಂದವರೆಲ್ಲರೂ ಅಲ್ಲ.
17 ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!
18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನು? ನಂಬದವರ ವಿಷಯ ವಾಗಿ ಅಲ್ಲವೇ?
19 ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ.
ಅಧ್ಯಾಯ 4

1 ಹೀಗಿರಲಾಗಿ ಆತನ ವಿಶ್ರಾಂತಿಯಲ್ಲಿ ಸೇರುವೆವೆಂಬ ವಾಗ್ದಾನವು ಇನ್ನೂ ಇರು ವಲ್ಲಿ ನಿಮ್ಮೊಳಗೆ ಯಾವನಾದರೂ ಆದರಿಂದ ತಪ್ಪುವವನಾದಾನೋ ಎಂದು ನಾವು ಭಯಪಡೋಣ.
2 ಅವರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು; ಆದರೆ ಕೇಳಿದವರು ನಂಬಲಿಲ್ಲವಾದ ಕಾರಣ ಸಾರಿದ ಆ ವಾಕ್ಯದಿಂದ ಅವರಿಗೆ ಪ್ರಯೋಜನವಾಗಲಿಲ್ಲ.
3 ಲೋಕದ ಅಸ್ತಿ ವಾರದೊಡನೆ (ಆತನ) ಕೆಲಸಗಳು ಮುಗಿದಿದ್ದರೂ ಆತನು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ಕೋಪದಿಂದ ಪ್ರಮಾಣಮಾಡಿ ದೆನು ಎಂದು ಹೇಳಿದನು. ನಂಬಿರುವ ನಾವೇ ಆ ವಿಶ್ರಾಂತಿಯಲ್ಲಿ ಪ್ರವೇಶಿಸುತ್ತೇವೆ.
4 ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು--ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂತಲೂ
5 ಈ ಸ್ಥಳದಲ್ಲಿ--ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದಿಲ್ಲ ಎಂತಲೂ ಆತನು ಹೇಳಿದ್ದಾನೆ.
6 ಆದದರಿಂದ ಕೆಲವರು ಅದರಲ್ಲಿ ಪ್ರವೇಶಿ ಸಲೇಬೇಕೆಂಬದು ಇನ್ನೂ ಇರುವದರಿಂದ ಯಾರಿಗೆ ಮೊದಲು ಅದು ಸಾರಲ್ಪಟ್ಟಿತೋ ಅವರು ಅಪ ನಂಬಿಕೆಯ ನಿಮಿತ್ತ ಒಳಗೆ ಪ್ರವೇಶಿಸಲಿಲ್ಲ.
7 ತಿರಿಗಿ ಬಹುಕಾಲ ಹೋದನಂತರ ಆತನು ದಾವೀದನ ಬಾಯಿಂದ ಮಾತನಾಡಿ--ಈ ಹೊತ್ತೇ ಎಂದು ಒಂದಾ ನೊಂದು ದಿವಸವನ್ನು ಗೊತ್ತುಮಾಡುತ್ತಾನೆ; ಹೇಗೆಂದರೆ--ನೀವು ಈ ಹೊತ್ತು ಆತನ ಧ್ವನಿಗೆ ಕಿವಿಗೊಟ್ಟರೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ ಎಂದು ಹೇಳುತ್ತಾನಷ್ಟೆ.
8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.
9 ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.
10 ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೊ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.
11 ಆದದರಿಂದ ನಾವು ಅವರ ಅಪನಂಬಿಕೆಯನ್ನು ಅನುಸರಿಸುವವ ರಾಗದಂತೆ ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸ ಪಡೋಣ.
12 ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
13 ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.
14 ಆಕಾಶಗಳನ್ನು ದಾಟಿಹೋದ ದೇವಕುಮಾರ ನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿರುವದರಿಂದ ನಾವು ಮಾಡಿರುವ ಅರಿಕೆಯನ್ನು ಬಿಗಿಯಾಗಿ ಹಿಡಿಯೋಣ.
15 ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.
16 ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.
ಅಧ್ಯಾಯ 5

1 ಪ್ರತಿಯೊಬ್ಬ ಮಹಾಯಾಜಕನು ಮನುಷ್ಯ ರೊಳಗಿಂದ ಆರಿಸಲ್ಪಟ್ಟು ಮನುಷ್ಯರಿ ಗೋಸ್ಕರ ದೇವರ ಕಾರ್ಯಗಳಿಗಾಗಿ ನೇಮಿಸಲ್ಪಡು ತ್ತಾನಲ್ಲಾ. ಅವನು ಕಾಣಿಕೆಗಳನ್ನೂ ಯಜ್ಞಗಳನ್ನೂ ಪಾಪಗಳಿಗೋಸ್ಕರ ಸಮರ್ಪಿಸಬೇಕು.
2 ತಾನೂ ಬಲಹೀನನಾಗಿರುವದರಿಂದ ಅವನು ಜ್ಞಾನವಿಲ್ಲದವರ ಮೇಲೆಯೂ ಮಾರ್ಗ ತಪ್ಪಿದವರ ಮೇಲೆಯೂ ಕರುಣೆ ತೋರಿಸಬಲ್ಲನು.
3 ಆ ಬಲಹೀನತೆಯ ಕಾರಣದಿಂದ ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಅರ್ಪಿಸಬೇಕಾದವ ನಾಗಿದ್ದಾನೆ.
4 ಇದಲ್ಲದೆ ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವವನ್ನು ವಹಿಸಿಕೊಳ್ಳದೆ ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ.
5 ಹಾಗೆಯೇ ಕ್ರಿಸ್ತನು ಸಹ ಮಹಾಯಾಜಕನಾಗುವದಕ್ಕೆ ತನ್ನನ್ನು ತಾನೇ ಘನಪಡಿಸಿಕೊಳ್ಳಲಿಲ್ಲ; ಆದರೆ--ನೀನು ನನ್ನ ಮಗನು; ನಾನೇ ಈ ದಿನ ನಿನ್ನನ್ನು ಪಡೆದಿದ್ದೇನೆ ಎಂದು ಹೇಳಿದಾತನೇ ಈ ಗೌರವವನ್ನು ಆತನಿಗೆ ಕೊಟ್ಟನು.
6 ಆತನು ಇನ್ನೊಂದು ಸ್ಥಳದಲ್ಲಿ--ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಹೇಳುತ್ತಾನೆ.
7 ಆತನು ತನ್ನ ಶರೀರದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ ಬಲ ವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಭಯಪಟ್ಟದ್ದರಲ್ಲಿ ಕೇಳಲ್ಪ ಟ್ಟನು.
8 ಹೀಗೆ ಆತನು ಮಗನಾಗಿದ್ದರೂ ತಾನು ಅನುಭ ವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತು ಕೊಂಡನು.
9 ಇದಲ್ಲದೆ ಸಿದ್ಧಿಗೆ ಬಂದು ತನಗೆ ವಿಧೇಯ ರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಆತನು ಕರ್ತನಾದನು.
10 ಆತನು ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆಂದು ಕರೆಯಲ್ಪಟ್ಟನು.
11 ಆತನ ವಿಷಯದಲ್ಲಿ ನಾವು ಹೇಳಬೇಕಾದ ಮಾತುಗಳು ಬಹಳ ಉಂಟು. ನಿಮ್ಮ ಕಿವಿಗಳು ಮಂದವಾದದರಿಂದ ಅದನ್ನು ವಿವರಿಸುವದು ಕಷ್ಟ ವಾಗಿದೆ.
12 ನೀವು ಇಷ್ಟರೊಳಗೆ ಬೋಧಕರಾಗಿರ ಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲ ಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ.
13 ಹಾಲು ಕುಡಿಯುವ ವನು ಕೂಸಿನಂತಿದ್ದು, ನೀತಿವಾಕ್ಯದಲ್ಲಿ ಅನುಭವವಿಲ್ಲದ ವನಾಗಿದ್ದಾನೆ.
14 ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ.
ಅಧ್ಯಾಯ 6

1 ಆದದರಿಂದ ಕ್ರಿಸ್ತನ ಬೋಧನೆಯ ಮೂಲ ಪಾಠಗಳನ್ನು ಬಿಟ್ಟು ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ ದೇವರ ಮೇಲಣ ನಂಬಿಕೆಯೂ
2 ಬಾಪ್ತಿಸ್ಮಗಳ ಬೋಧನೆಯೂ ಹಸ್ತಾ ರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಇವುಗಳ ವಿಷಯದಲ್ಲಿ ಅಸ್ತಿವಾರವನ್ನು ತಿರಿಗಿ ಹಾಕದೆ ನಾವು ಪರಿಪೂರ್ಣತೆಗೆ ಹೋಗೋಣ.
3 ದೇವರ ಚಿತ್ತವಾದರೆ ಹೀಗೆ ಮಾಡುವೆವು.
4 ಒಂದು ಸಾರಿ ಬೆಳಕನ್ನು ಹೊಂದಿ ಪರಲೋಕ ದಿಂದಾದ ದಾನದ ರುಚಿಯನ್ನು ನೋಡಿ ಪವಿತ್ರಾತ್ಮನಲ್ಲಿ ಪಾಲುಗಾರರಾಗಿ
5 ಶ್ರೇಷ್ಠವಾದ ದೇವರ ವಾಕ್ಯವನ್ನೂ ಬರುವ ಲೋಕದ ಮಹತ್ವವನ್ನೂ ರುಚಿನೋಡಿ ದವರು ಬಿದ್ದು ಹೋಗುವದಾದರೆ
6 ಅವರಲ್ಲಿ ತಿರಿಗಿ ಮಾನಸಾಂತರವನ್ನು ಹುಟ್ಟಿಸುವದು ಅಸಾಧ್ಯ; ಯಾಕಂದರೆ ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗ ವಾಗಿ ಅವಮಾನಪಡಿಸುವವರೂ ಆಗಿದ್ದಾರೆ.
7 ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ ಅವರಿಗೆ ಅನುಕೂಲ ವಾದ ಬೆಳೆಯನ್ನು ಕೊಟ್ಟರೆ ದೇವರ ಆಶೀರ್ವಾದವನ್ನು ಹೊಂದುತ್ತದೆ;
8 ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ತಿರಸ್ಕರಿಸಲ್ಪಟ್ಟು ಶಾಪಕ್ಕೆ ಗುರಿಯಾಗುತ್ತದೆ. ಅದರ ಅಂತ್ಯವು ಸುಡಲ್ಪಡುವದೇ.
9 ಆದರೆ ಪ್ರಿಯರೇ, ಈ ರೀತಿಯಾಗಿ ನಾವು ಮಾತ ನಾಡಿದರೂ ನೀವು ಇದಕ್ಕಿಂತ ಉತ್ತಮವಾಗಿಯೂ ರಕ್ಷಣಕರವಾಗಿಯೂ ಇದ್ದೀರೆಂದು ದೃಢವಾಗಿ ನಂಬಿ ದ್ದೇವೆ.
10 ನೀವು ಪರಿಶುದ್ಧರಿಗೆ ಉಪಚಾರ ಮಾಡಿದಿರಿ, ಇನ್ನು ಮಾಡುತ್ತಾ ಇದ್ದೀರಿ. ಈ ನಿಮ್ಮ ಕೆಲಸವನ್ನೂ ಇದರಲ್ಲಿ ನೀವು ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯ ಪ್ರಯಾಸವನ್ನೂ ಮರೆಯು ವದಕ್ಕೆ ದೇವರು ಅನ್ಯಾಯಸ್ಥನಲ್ಲ.
11 ಅಂತ್ಯದವರೆಗೆ ನಿರೀಕ್ಷೆಯ ಸಂಪೂರ್ಣ ನಿಶ್ಚಯ ತ್ವಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
12 ಹೀಗೆ ನೀವು ಮೈಗಳ್ಳರಾಗಿರದೆ ನಂಬಿಕೆಯಿಂದಲೂ ತಾಳ್ಮೆ ಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವ ವರನ್ನು ಅನುಸರಿಸುವವರಾಗಿರುವಿರಿ.
13 ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದ್ದದ್ದರಿಂದ ತನ್ನಾ ಣೆಯಿಟ್ಟು--
14 ಖಂಡಿತವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೇನು. ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂದು ಹೇಳಿದನಷ್ಟೆ.
15 ಹೀಗೆ ಅವನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಹೊಂದಿದನು.
16 ಮನುಷ್ಯರು ನಿಜವಾಗಿಯೂ ತಮಗಿಂತ ಹೆಚ್ಚಿನವನ ಆಣೆಯಿಡು ತ್ತಾರಷ್ಟೆ; ಆಣೆಯನ್ನು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ.
17 ಅದರಲ್ಲಿ ದೇವರು ತನ್ನ ಸಂಕಲ್ಪವು ನಿಶ್ಚಲವಾದದ್ದೆಂಬದನ್ನು ವಾಗ್ದಾನಕ್ಕೆ ಬಾಧ್ಯರಾಗುವವರಿಗೆ ಬಹು ಸ್ಪಷ್ಟವಾಗಿ ತೋರಿಸ ಬೇಕೆಂದು ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು.
18 ಆಶ್ರಯವನ್ನು ಹೊಂದುವದಕ್ಕೆ ಓಡಿ ಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಸುಳ್ಳಾಡದ ದೇವರ ಎರಡು ನಿಶ್ಚಲವಾದ ಆಧಾರಗಳಲ್ಲಿ ನಮಗೆ ಬಲವಾದ ಆದರಣೆ ಉಂಟಾ ಯಿತು.
19 ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಖಂಡಿತವಾದದ್ದೂ ಸ್ಥಿರವಾದದ್ದೂ ಆಗಿದೆ. ಅದು ತೆರೆಯೊಳಗಿರುವಲ್ಲಿಗೆ ಪ್ರವೇಶಿಸುವಂಥದು.
20 ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ಮಾಡಲ್ಪಟ್ಟು ನಮಗೋಸ್ಕರ ಮುಂದಾಗಿ ಅದರೊಳಗೆ ಪ್ರವೇಶಿಸಿದ್ದಾನೆ.
ಅಧ್ಯಾಯ 7

1 ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದು ರಾಜರನ್ನು ಸಂಹರಿಸಿ ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶಿರ್ವದಿಸಿದನು.
2 ಅಬ್ರಹಾಮನು ಎಲ್ಲವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನು. ಆತನ ಹೆಸರಿಗೆ ಮೊದಲನೆಯದಾಗಿ ನೀತಿರಾಜನೆಂದು ತರುವಾಯ ಸಾಲೇಮಿನರಾಜ ಅಂದರೆ ಸಮಾಧಾನದ ರಾಜನೆಂದು ಅರ್ಥ.
3 ಆತನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ದಿವಸಗಳ ಆರಂಭವೂ ಜೀವದ ಅಂತ್ಯವೂ ಇಲ್ಲ. ಆದರೆ ಆತನು ದೇವರ ಮಗನಿಗೆ ಹೋಲಿಕೆಯಾಗಿ ಮಾಡಲ್ಪಟ್ಟಿದ್ದಾನೆ. ಇದಲ್ಲದೆ ಆತನು ನಿರಂತರವಾಗಿ ಯಾಜಕನಾಗಿದ್ದಾನೆ.
4 ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.
5 ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು.
6 ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
7 ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ.
8 ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
8 ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
9 ಇದು ಮಾತ್ರವಲ್ಲದೆ ದಶಮಭಾಗ ಗಳನ್ನು ತಕ್ಕೊಳ್ಳುವ ಲೇವಿಯೂ ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿ ತೆಂದು ನಾನು ಹೇಳಬಹುದು;
10 ಹೇಗೆಂದರೆ ಮೆಲ್ಕಿಜೆದೇಕನು ಲೇವಿಯ ಮೂಲ ಪುರಷನನ್ನು ಎದುರುಗೊಂಡಾಗ ಇವನಲ್ಲಿ ಲೇವಿಯು ಅಡಕ ವಾಗಿದ್ದನು.
11 ಲೇವಿಯ ಯಾಜಕತ್ವದಿಂದ ಸಂಪೂರ್ಣ ಸಿದ್ಧಿ ಉಂಟಾಗಿದ್ದರೆ ಆರೋನನ ತರಹದವನಾಗಿರದೆ ಮೆಲ್ಕಿ ಜೆದೇಕನ ತರಹದ ಬೇರೊಬ್ಬ ಯಾಜಕನು ಎದ್ದೇಳು ವದು ಅವಶ್ಯವೇನಿತ್ತು? (ಅದರಲ್ಲಿ ಜನರು ನ್ಯಾಯ ಪ್ರಮಾಣವನ್ನು ಹೊಂದಿದರು).
12 ಯಾಜಕತ್ವವು ಬೇರೆಯಾದರೆ ನ್ಯಾಯಪ್ರಮಾಣವು ಕೂಡ ಬೇರೆ ಯಾಗುವದು ಅಗತ್ಯ.
13 ಇವು ಯಾವಾತನ ವಿಷಯ ದಲ್ಲಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸಂಬಂಧಪಟ್ಟವನು; ಆ ಗೋತ್ರದವರಲ್ಲಿ ಒಬ್ಬನೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ.
14 ನಮ್ಮ ಕರ್ತನು ಯೂದಾ ಗೋತ್ರದಲ್ಲಿ ಜನಿಸಿದಾತನೆಂಬದು ಸ್ಪಷ್ಟವಾಗಿದೆಯಷ್ಟೆ; ಈ ಗೋತ್ರದ ವಿಷಯದಲ್ಲಿ ಮೋಶೆಯು ಯಾಜಕರ ಸಂಬಂಧವಾಗಿ ಏನೂ ಹೇಳಲಿಲ್ಲ.
15 ಮೆಲ್ಕಿಜೆದೇಕನ ಹೋಲಿಕೆಗನುಸಾರ ಇನ್ನೊಬ್ಬ ಯಾಜಕನು ಏಳುತ್ತಾನೆಂಬದು ಇನ್ನು ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.
16 ಆತನು ಶಾರೀರಕವಾದ ಆಜ್ಞೆಯ ನಿಯಮಕ್ಕನುಸಾರ ಅಲ್ಲದೆ ನಿರ್ಲಯವಾದ ಜೀವದ ಶಕ್ತಿಗನುಸಾರವಾಗಿ ಮಾಡಲ್ಪಟ್ಟಿದ್ದಾನೆ.
17 ಆತನ ವಿಷಯದಲ್ಲಿ--ನೀನು ಸದಾಕಾಲವು ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದೀ ಎಂದು ಆತನು ಸಾಕ್ಷಿ ಕೊಡುತ್ತಾನೆ.
18 ಮೊದಲಿದ್ದ ಆಜ್ಞೆಯು ನಿರ್ಬಲವಾಗಿಯೂ ನಿಷ್ಪ್ರಯೋಜಕವಾಗಿಯೂ ಇದ್ದು ನಿಜವಾಗಿಯೂ ರದ್ದಾಗಿಹೋಯಿತು.
19 ನ್ಯಾಯ ಪ್ರಮಾಣವು ಯಾವದನ್ನೂ ಸಿದ್ದಿಗೆ ತಾರದಿರುವ ದರಿಂದ ಉತ್ತಮವಾಗಿರುವ ನಿರೀಕ್ಷೆಯು ಸಿದ್ಧಿಗೆ ತಂದಿತು. ಇದರಿಂದ ನಾವು ದೇವರ ಸವಿಾಪಕ್ಕೆ ಸೇರುತ್ತೇವೆ.
20 ಆತನು ಆಣೆಯಿಲ್ಲದೆ ಯಾಜಕನಾಗಲೇ ಇಲ್ಲ.
21 (ಆ ಯಾಜಕರೂ ಆಣೆಯಿಲ್ಲದೆ ಯಾಜಕರಾದರು); ಈತನಾದರೊ--ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದೀ ಎಂದು ಆತನಿಗೆ ಹೇಳಿದ ಕರ್ತನು ಆಣೆಯಿಟ್ಟು ನುಡಿದನು, ಪಶ್ಚಾತ್ತಾಪಪಡುವದಿಲ್ಲ.
22 ಇದರಿಂದಲೇ ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು.
23 ಅವರು (ಲೇವಿಯರು) ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣ ಕಾರಣದಿಂದ ನಿಜವಾಗಿಯೂ ಅವರಲ್ಲಿ ಯಾಜಕರಾದವರು ಅನೇಕರು;
24 ಈತನಾ ದರೋ ಸದಾಕಾಲವಿರುವದರಿಂದ ಬದಲಾವಣೆಯಾ ಗದ ಯಾಜಕತ್ವವನ್ನು ಹೊಂದಿದ್ದಾನೆ.
25 ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
26 ಇಂಥವನೇ ನಮಗೆ ಬೇಕಾದ ಮಹಾ ಯಾಜಕನು. ಈತನು ಪರಿಶುದ್ಧನೂ ಕೇಡು ಮಾಡ ದವನೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವಾತನು ಆಕಾಶಗಳಿಗಿಂತ ಉನ್ನತವಾಗಿ ಮಾಡಲ್ಪಟ್ಟಾತನೂ ಆಗಿದ್ದಾನೆ.
27 ಮೊದಲು ತನ್ನ ಸ್ವಂತ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪ ಪರಿಹಾರಕ್ಕಾಗಿ ಯಜ್ಞಾರ್ಪಣೆ ಮಾಡುವ ಮಹಾ ಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸ ಬೇಕಾದ ಅವಶ್ಯವಿಲ್ಲ. ಯಾಕಂದರೆ ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
28 ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.
ಅಧ್ಯಾಯ 8

1 ನಾವು ಈಗ ಹೇಳುವ ವಿಷಯಗಳ ಸಾರಾಂಶವೇನಂದರೆ--ಪರಲೋಕದೊ ಳಗೆ ಮಹಿಮೆಯುಳ್ಳಾತನ ಸಿಂಹಾಸನದ ಬಲಗಡೆಯಲ್ಲಿ ಕೂತುಕೊಂಡಿರುವ ಮಹಾಯಾಜಕನು ನಮಗಿದ್ದಾನೆ.
2 ಈತನು ಪವಿತ್ರ ಸ್ಥಾನದಲ್ಲಿ ಅಂದರೆ ಮನುಷ್ಯನಿಂದಲ್ಲ, ಕರ್ತನೇ ಹಾಕಿದ ನಿಜವಾದ ಗುಡಾರದಲ್ಲಿ ಸೇವೆ ನಡಿಸುವಾತನಾಗಿದ್ದಾನೆ.
3 ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರು ತ್ತಾನಷ್ಟೆ. ಆದದರಿಂದ ಸಮರ್ಪಿಸುವದಕ್ಕೆ ಈತನಿಗೆ ಸಹ ಏನಾದರೂ ಇರುವದು ಅವಶ್ಯವಾಗಿದೆ.
4 ಈತನು ಇನ್ನೂ ಭೂಮಿಯ ಮೇಲೆ ಇದ್ದದ್ದೇಯಾಗಿದ್ದರೆ ಯಾಜಕ ನಾಗುವ ಹಾಗಿದ್ದಿಲ್ಲ. ಯಾಕಂದರೆ ನ್ಯಾಯಪ್ರಮಾಣದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವ ಯಾಜಕರು ಇದ್ದೇ ಇರುತ್ತಾರೆ;
5 ಅವರು ಪರಲೋಕದಲ್ಲಿರುವವಗಳ ನಿದರ್ಶನವೂ ಛಾಯೆಯೂ ಆಗಿರುವದರಲ್ಲಿ (ಆಲಯ ದಲ್ಲಿ) ಸೇವೆಯನ್ನು ನಡಿಸುವವರು. ಮೋಶೆಯು ದೇವರಿಂದ ಎಚ್ಚರಿಸಲ್ಪಟ್ಟು ಗುಡಾರವನ್ನು ಮಾಡುವದ ಕ್ಕಿದ್ದಾಗ--ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇ
6 ಆದರೆ ಆತನು ಅದಕ್ಕಿಂತ ಶ್ರೇಷ್ಠವಾದ ಸೇವೆಯನ್ನು ಹೊಂದಿದ ವನಾಗಿದ್ದಾನೆ; ಉತ್ತಮವಾದ ವಾಗ್ದಾನಗಳ ಮೇಲೆ ಸ್ಥಾಪಿತವಾದ ಶ್ರೇಷ್ಠವಾದ ಒಡಂಬಡಿಕೆಗೆ ಸಹ ಮಧ್ಯಸ್ಥನಾಗಿದ್ದಾನೆ.
7 ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲ ದ್ದಾಗಿದ್ದರೆ ಎರಡನೆಯದಕ್ಕೆ ಅವಕಾಶವು ಇರುತ್ತಿರಲಿಲ್ಲ.
8 ಆತನು ಆದರ ಮೇಲೆ ತಪ್ಪುಹೊರಿಸಿ ಹೀಗೆಂ ದನು--ಇಗೋ, ನಾನು ಇಸ್ರಾಯೇಲ್‌ ಮನೆತನ ದೊಂದಿಗೂ ಯೆಹೂದ ಮನೆತನದೊಂದಿಗೂ ಹೊಸ ದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿ ಕೊಳ್ಳುವ ದಿನಗಳು ಬರುವವು.
9 ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶ ದೊಳಗಿಂದ ಕರಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾ ದದರಿಂದ ನಾನು ಅವರನ್ನು ಲಕ್ಷ್ಯಕ್ಕೆ ತರಲಿಲ್ಲ ಎಂದು ಕರ್ತನು ಹೇಳುತ್ತಾನೆ.
10 ಆ ದಿನಗಳ ತರುವಾಯ ನಾನು ಇಸ್ರಾಯೇಲ್‌ ಮನೆತನದ ವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು, ಅದೇನಂದರೆ--ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು; ಅವರ ಹೃದಯಗಳಲ್ಲಿ ಅವುಗಳನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರ
11 ಇದಲ್ಲದೆ ಪ್ರತಿ ಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದ ರನಿಗೂ--ಕರ್ತನನ್ನು ತಿಳಿದುಕೊಳ್ಳಿರಿ ಎಂದು ಉಪ ದೇಶಿಸುವದಿಲ್ಲ; ಯಾಕಂದರೆ ಚಿಕ್ಕವರಿಂದ ದೊಡ್ಡವರ ವರೆಗೂ ನನ್ನನ್ನು ಅರಿತುಕೊಳ್ಳುವರು.
12 ನಾನು ಅವರ ಅನೀತಿಯ ವಿಷಯವಾಗಿ ಕರುಣೆಯುಳ್ಳವನಾಗಿದ್ದು ಅವರ ಪಾಪಗಳನ್ನೂ ಅಪರಾಧಗಳನ್ನೂ ನನ್ನ ನೆನಪಿಗೆ ಇನ್ನೆಂದಿಗೂ ತರುವದಿಲ್ಲ ಎಂದು ಕರ್ತನು ನುಡಿಯು ತ್ತಾನೆ.
13 ಇಲ್ಲಿ ಆತನು--ಹೊಸಒಡಂಬಡಿಕೆಯೆಂದು ಹೇಳಿದ್ದರಲ್ಲಿ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿ ದ್ದಾನೆ. ಅದು ಹಳೇದಾಗುತ್ತಾ ಕ್ಷೀಣವಾಗಿ ಇಲ್ಲದಂತಾ ಗುವದಕ್ಕೆ ಸಿದ್ಧವಾಗಿದೆ ಎಂದು ಹೇಳುತ್ತಾನೆ.
ಅಧ್ಯಾಯ 9

1 ಹೀಗಿದ್ದರೂ ಮೊದಲನೆಯ ಒಡಂಬಡಿಕೆ ಯಲ್ಲಿ ನಿಜವಾಗಿಯೂ ದೈವಸೇವೆಯ ನಿಯಮಗಳಿದ್ದವು; ಇಹಲೋಕ ಸಂಬಂಧವಾದ ಪವಿತ್ರಸ್ಥಳವಿತ್ತು.
2 ಅಂದರೆ ಒಂದು ಗುಡಾರವು ಕಟ್ಟಲ್ಪ ಟ್ಟಿತು. ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಸಮ್ಮುಖದ ರೊಟ್ಟಿ ಇವುಗಳಿದ್ದವು; ಅದಕ್ಕೆ ಪವಿತ್ರ ಸ್ಥಳ ಎಂದು ಹೆಸರು.
3 ಎರಡನೆಯ ತೆರೆಯ ಆಚೆಯಲ್ಲಿ ಅತಿಪವಿತ್ರ ಸ್ಥಳವೆನಿಸಿಕೊಳ್ಳುವ ಇನ್ನೊಂದು ಗುಡಾರವಿತ್ತು;
4 ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಕಲ್ಲಿನ ಹಲಿಗೆ ಗಳೂ ಇದ್ದವು;
5 ಅದರ ಮೇಲೆ ಪ್ರಭಾವದ ಕೆರೂಬಿ ಯರು ಕೃಪಾಸನವನ್ನು ಮುಚ್ಚಿಕೊಂಡಿದ್ದರು. ಸದ್ಯಕ್ಕೆ ಈ ವಿಷಯಗಳನ್ನು ಪ್ರತ್ಯೇಕವಾಗಿ ನಾವು ವಿವರಿಸು ವದಕ್ಕೆ ಆಗುವದಿಲ್ಲ.
6 ಇವುಗಳು ಹೀಗೆ ನೇಮಕ ಮಾಡಲ್ಪಟ್ಟಾಗ ಯಾಜಕರು ಯಾವಾಗಲೂ ದೇವರ ಸೇವೆಯನ್ನು ಪೂರೈಸುವವರಾಗಿ ಗುಡಾರದ ಮೊದಲನೆಯ ಭಾಗದೊಳಗೆ ಪ್ರವೇಶಿಸುವರು.
7 ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರುಷಕ್ಕೆ ಒಂದೇ ಸಾರಿ ಹೋಗುತ್ತಾನೆ. ಅವನು ರಕ್ತವನ್ನು ತಕ್ಕೊಳ್ಳದೆ ಹೋಗುವದಿಲ್ಲ; ಆ ರಕ್ತವನ್ನು ತನ ಗೋಸ್ಕರವೂ ಜನರ ತಪ್ಪುಗಳಿಗೋಸ್ಕರವೂ ಸಮರ್ಪಿಸುತ್ತಾನೆ.
8 ಮೊದಲನೆಯ ಗುಡಾರವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಿಲ್ಲಿವೆಂಬದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.
9 ಆ ಕಾಲಕ್ಕೆ ಅದು ಸಾಮ್ಯವಾಗಿದ್ದು ಆಗ ಸೇವೆ ಮಾಡುವವನಿಗಾಗಿ ಮನಸ್ಸಾಕ್ಷಿಯ ವಿಷಯದಲ್ಲಿ ಸಂಪೂರ್ಣ ಮಾಡಲಾರದ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲ್ಪಡುತ್ತಿದ್ದವು.
10 ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳ ಲ್ಲಿಯೂ ಶಾರೀರಕ ನಿಯಮಗಳಲ್ಲಿಯೂ ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
11 ಆದರೆ ಕ್ರಿಸ್ತನು ಬರಬೇಕಾಗಿದ್ದ ಮೇಲುಗಳ ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಕಟ್ಟಡಕ್ಕೆ ಸಂಬಂಧವಾ ಗಿರದೆ ಶ್ರೇಷ್ಠವಾಗಿಯೂ ಪರಿಪೂರ್ಣವಾಗಿಯೂ ಇರುವ ಗುಡಾರದ ಮೂಲಕ
12 ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು.
13 ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ
14 ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
15 ಈ ಕಾರಣದಿಂದ ಮೊದಲನೇ ಒಡಂಬಡಿಕೆಯ ಅಧೀನದಲ್ಲಿದ್ದ ಅಕ್ರಮಗಳ ವಿಮೋಚನೆಗಾಗಿ ಕರೆಯಲ್ಪ ಟ್ಟವರು ನಿತ್ಯಬಾಧ್ಯತೆಯ ವಾಗ್ದಾನವನ್ನು ಹೊಂದು ವದಕ್ಕೆ ಮರಣದ ಮೂಲಕ ಆತನು ಹೊಸ ಒಡಂಬಡಿ ಕೆಗೆ ಮಧ್ಯಸ್ಥನಾಗಿದ್ದಾನೆ.
16 ಮರಣಶಾಸನವು ಇರುವಲ್ಲಿ ಅದನ್ನು ಬರೆಯಿಸಿದವನ ಮರಣವಾಗುವದು ಅವಶ್ಯ.
17 ಜನರ ಮರಣದ ನಂತರ ಮರಣ ಶಾಸನವು ನಡೆ ಯುವದೇ ಹೊರತು ಬರೆಯಿಸಿದವನು ಜೀವದಿಂದಿರು ವಾಗ ಎಂದಿಗೂ ಪರಿಣಾಮಕರವಾಗಿರುವದೇ ಇಲ್ಲ.
18 ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯಾ ದರೂ ರಕ್ತವಿಲ್ಲದೆ ಪ್ರತಿಷ್ಠಿತವಾಗಲಿಲ್ಲ.
19 ಮೋಶೆಯು ಪ್ರತಿಯೊಂದು ವಿಧಿಯನ್ನು ನ್ಯಾಯಪ್ರಮಾಣದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ನೀರು, ಕೆಂಪು ಉಣ್ಣೇ, ಹಿಸ್ಸೋಪು ಇವು ಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಗ್ರಂಥದ ಮೇಲೆ ಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿ--
20 ಇದು ದೇವರು ನಿಮಗೋಸ್ಕರ ವಿಧಿಸಿದ ಒಡಂಬಡಿಕೆಯ ರಕ್ತವಾಗಿದೆ ಎಂದು ಹೇಳಿದನು.
21 ಇದಲ್ಲದೆ ಗುಡಾರದ ಮೇಲೆಯೂ ಸೇವೆಗೆ ಬೇಕಾಗಿರುವ ಎಲ್ಲಾ ಉಪ ಕರಣಗಳ ಮೇಲೆಯೂ ರಕ್ತವನ್ನು ಪ್ರೋಕ್ಷಿಸಿದನು.
22 ನ್ಯಾಯಪ್ರಮಾಣದಿಂದ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತ ಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ.
23 ಪರಲೋಕದಲ್ಲಿರುವ ವಸ್ತುಗಳಿಗೆ ಮಾದರಿಯಾಗಿ ರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ ಪರಲೋಕದವುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಬೇಕು.
24 ಯಾಕಂದರೆ ಕ್ರಿಸ್ತನು ನಿಜವಾದವುಗಳಿಗೆ ಸಾಮ್ಯ ವಾಗಿದ್ದು ಕೈಯಿಂದ ಕಟ್ಟಿದ್ದ ಪರಿಶುದ್ಧ ಸ್ಥಳಗಳಲ್ಲಿ ಪ್ರವೇಶಿಸದೆ ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳು ವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.
25 ಇದ ಲ್ಲದೆ ಮಹಾಯಾಜಕನು ವರುಷ ವರುಷವೂ ಅನ್ಯರಕವನ್ನು ತೆಗೆದುಕೊಂಡು ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ ಆತನು ತನ್ನನ್ನು ಅನೇಕ ಸಾರಿ ಸಮರ್ಪಿಸುವದಕ್ಕೆ ಪ್ರವೇಶಿಸಲಿಲ್ಲ.
26 ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕದ ಅಸ್ತಿವಾರದಿಂದ ಅನೇಕ ಸಾರಿ ಬಾಧೆಪಡಬೇಕಾಗಿತ್ತು; ಆದರೆ ಈಗ ಒಂದೇ ಸಾರಿ ಲೋಕಾಂತ್ಯದಲ್ಲಿ ಪಾಪನಿವಾರಣೆ ಮಾಡುವದಕ್ಕೆ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷ ನಾದನು.
27 ಒಂದೇ ಸಾರಿ ಸಾಯುವದೂ ತರುವಾಯ ನ್ಯಾಯತೀರ್ಪೂ ಮನುಷ್ಯರಿಗೆ ನೇಮಕವಾಗಿದೆ.
28 ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
ಅಧ್ಯಾಯ 10

1 ನ್ಯಾಯಪ್ರಮಾಣವು ಬರಬೇಕಾಗಿದ್ದ ಮೇಲುಗಳ ಛಾಯೆಯಾಗಿದೆ; ಆದರೆ ಅದು ಅವುಗಳ ನಿಜಸ್ವರೂಪವಲ್ಲವಾದದರಿಂದ ಆ ನ್ಯಾಯ ಪ್ರಮಾಣವು ವರುಷ ವರುಷಕ್ಕೆ ಯಾವಾ ಗಲೂ ಅರ್ಪಿತವಾಗುವ ಯಜ್ಞಗಳನ್ನು ಅರ್ಪಿಸುವದಕ್ಕೆ ಬರುವವರನ್ನು ಎಂದಿಗೂ ಸಿದ್ಧಿಗೆ ತರಲಾರದು.
2 ತಂದಿದ್ದ ಪಕ್ಷದಲ್ಲಿ ಆ ಯಜ್ಞಗಳ ಸಮರ್ಪಣೆಯು ನಿಂತು ಹೋಗುತ್ತಿತ್ತಲ್ಲಾ. ಯಾಕಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ ಅವರಿಗೆ ಎಂದಿಗೂ ಪಾಪಗಳ ಮನಸ್ಸಾಕ್ಷಿ ಇರುತ್ತಿರಲಿಲ್ಲ.
3 ಆದರೆ ಪ್ರತಿ ವರುಷವು ಆ ಯಜ್ಞಗಳಲ್ಲಿ ತಿರಿಗಿ ಪಾಪಗಳ ಜ್ಞಾಪಕವಾಗುವದುಂಟು.
4 ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ.
5 ಆದದರಿಂದ ಆತನು ಭೂಲೋಕದೊಳಗೆ ಬರುವಾಗ--(ದೇವರೇ,) ಯಜ್ಞವೂ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿಕೊಟ್ಟೀ;
6 ದಹನ ಬಲಿಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ;
7 ಆಗ ನಾನು--ಇಗೋ, ಓ ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ; ನಿನ್ನ ಚಿತ್ತವನ್ನು ನೇರವೇರಿಸುವದಕ್ಕೆ ಬಂದಿ ದ್ದೇನೆ ಎಂದು ಹೇಳಿದೆನು ಅನ್ನುತ್ತಾನೆ.
8 ಆಮೇಲೆ ಆತನು--ನ್ಯಾಯಪ್ರಮಾಣದಂತೆ ಅರ್ಪಿಸಲ್ಪಡುವಂಥ ಯಜ್ಞವೂ ಅರ್ಪಣೆಯೂ ದಹನ ಬಲಿಗಳೂ ಪಾಪ ಕ್ಕಾಗಿ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ ಇಲ್ಲವೆ ಅವುಗಳಲ್ಲಿ ನಿನಗೆ ಸಂತೋಷವಿರಲಿಲ್ಲ ಎಂದು ಹೇಳಿ ದ್ದಾನೆ.
9 ತರು ವಾಯ--ಇಗೋ, ಓ ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ ಎಂತಲೂ ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವ ದಕ್ಕಾಗಿ ಮೊದಲನೆಯದನ್ನು ತೆಗೆದುಹಾಕುತ್ತಾನೆ.
10 ಯೇಸು ಕ್ರಿಸ್ತನು ಒಂದೇ ಸಾರಿ ಎಂದೆಂದಿಗೂ ಅರ್ಪಿಸಿದ ತನ್ನ ದೇಹದ ಮೂಲಕ ಆತನ ಚಿತ್ತದಿಂದ ನಾವು ಶುದ್ಧರಾದೆವು.
11 ಇದಲ್ಲದೆ ಪ್ರತಿ ಯಾಜಕನು ದಿನಾಲು ಸೇವೆ ಮಾಡುತ್ತಾ ಎಂದಿಗೂ ಪಾಪವನ್ನು ತೆಗೆದು ಹಾಕಲಾರ ದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಅರ್ಪಿಸುತ್ತಾ ನಿಂತುಕೊಂಡಿರುವನು.
12 ಆದರೆ ಈ ಮನುಷ್ಯನು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲ ಗಡೆಯಲ್ಲಿ ಕೂತುಕೊಂಡನು.
13 ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದ ಪೀಠವಾಗಿ ಮಾಡಲ್ಪಡುವ ತನಕ ಆತನು ಎದುರುನೋಡುವನು.
14 ಆತನು ಪವಿತ್ರರಾಗುವವರನ್ನು ಒಂದೇ ಅರ್ಪಣೆಯಿಂದ ನಿರಂ ತರಕ್ಕೂ ಸಂಪೂರ್ಣರನ್ನಾಗಿ ಮಾಡಿದ್ದಾನೆ.
15 ಪವಿ ತ್ರಾತ್ಮನು ಸಹ ಇದರ ವಿಷಯವಾಗಿ ನಮಗೆ ಸಾಕ್ಷಿ ಕೊಡುವಾತನಾಗಿದ್ದಾನೆ;
16 ಹೇಗೆಂದರೆ ಆತನು ಮೊದಲು ಹೇಳಿದಂತೆ--ಆ ದಿನಗಳಾದ ಮೇಲೆ ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸುಗಳಲ್ಲಿ ಅವುಗಳನ್ನು ಬರೆಯುವೆನು. ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಇದೇ.
17 ಇದಲ್ಲದೆ ಅವರ ಪಾಪಗಳನ್ನೂ ದುಷ್ಕೃತ್ಯ ಗಳನ್ನೂ ನನ್ನ ನೆನಪಿಗೆ ಇನ್ನೆಂದಿಗೂ ತರುವದಿಲ್ಲ ಎಂದು ಕರ್ತನು ಹೇಳುತ್ತಾನೆ.
18 ಪಾಪವು ಪರಿಹಾರವಾದಲ್ಲಿ ಇನ್ನು ಎಂದಿಗೂ ಅದಕ್ಕಾಗಿ ಅರ್ಪಣೆ ಇರುವದಿಲ್ಲ.
19 ಹೀಗಿರುವಲ್ಲಿ ಸಹೋದರರೇ, ಯೇಸುವಿನ ರಕ್ತದ ಮೂಲಕ ಅತಿಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು.
20 ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು.
21 ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವದರಿಂದ
22 ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ.
23 ನಮ್ಮ ನಂಬಿಕೆಯಿಂದಾದ ಅರಿಕೆಯನ್ನು ನಿಶ್ಚಂಚಲ ದಿಂದ ಬಲವಾಗಿ ಹಿಡಿಯೋಣ. (ಯಾಕಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು).
24 ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವದ ಕ್ಕಾಗಿಯೂ ಸತ್ಕಾರ್ಯ ಮಾಡುವದಕ್ಕಾಗಿಯೂ ಒಬ್ಬರ ನ್ನೊಬ್ಬರು ಪ್ರೇರೇಪಿಸೋಣ.
25 ಸಭೆಯಾಗಿ ಕೂಡಿ ಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿ ಸೋಣ. ಆ ದಿನವು ಸವಿಾಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.
26 ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ.
27 ಆದರೆ ಭಯದಿಂದ ಖಂಡಿತವಾಗಿ ಎದುರು ನೋಡತಕ್ಕ ತೀರ್ಪು ವಿರೋಧಿ ಗಳನ್ನು ದಹಿಸುವ ಕೋಪಾಗ್ನಿಯೂ ಇರುವವು.
28 ಮೋಶೆಯ ನ್ಯಾಯಪ್ರಮಾಣವನ್ನು ಅಸಡ್ಡೆ ಮಾಡಿ ದವನನ್ನು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕನಿಕರವಿಲ್ಲದೆ ಕೊಲ್ಲುತ್ತಿದ್ದರು.
29 ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
30 ಮುಯ್ಯಿ ತೀರಿಸುವದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆ ನೆಂದು ಹೇಳಿದ ಕರ್ತನನ್ನು ನಾವು ಬಲ್ಲೆವು; ಇದ ಲ್ಲದೆ--ಕರ್ತನು ತನ್ನ ಜನರಿಗೆ ನ್ಯಾಯತೀರಿಸುವ ನೆಂತಲೂ ಹೇಳಿಯದೆ.
31 ಜೀವವುಳ್ಳ ದೇವರ ಕೈಯಲ್ಲಿ ಸಿಕ್ಕಿ ಬೀಳುವದು ಭಯಂಕರವಾದದ್ದು.
32 ಆದರೆ ನೀವು ಪ್ರಕಾಶದಲ್ಲಿ ಸೇರಿದ ಮೇಲೆ ಸಂಕಷ್ಟಗಳ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.
33 ಕೆಲವು ಸಾರಿ ನೀವು ಎರಡನ್ನು ಅಂದರೆ ನಿಂದೆಗಳನ್ನೂ ಉಪ ದ್ರವಗಳನ್ನೂ ಅನುಭವಿಸಿ ಹಾಸ್ಯದ ನೋಟಕ್ಕೆ ಗುರಿ ಯಾದಿರಿ; ಕೆಲವು ಸಾರಿ ಅಂಥವುಗಳನ್ನು ಅನುಭವಿಸು ವವರ ಜೊತೆಗಾರರಾದಿರಿ.
34 ಬೇಡಿಗಳನ್ನು ಹಾಕಿಸಿ ಕೊಂಡವನಾದ ನನ್ನ ವಿಷಯದಲ್ಲಿ ನೀವು ಅನುತಾಪ ಗೊಂಡು ಪರಲೋಕದಲ್ಲಿ ನಿಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ನಿಮ್ಮಲ್ಲಿ ನೀವೇ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳು ವವರಿಗೆ ಸಂತೋಷದಿಂದ ಬಿಟ್ಟಿರಿ.
35 ಆದದರಿಂದ ನಿಮ್ಮ ಭರವಸವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ನಷ್ಟ ಪರಿಹಾರದ ದೊಡ್ಡ ಪ್ರತಿಫಲ ಉಂಟು.
36 ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ.
37 ನಿಶ್ಚಯವಾಗಿ ಬರುವಾತನು ಇನ್ನು ಸ್ವಲ್ಪ ಕಾಲ ದಲ್ಲಿ ಬರುವನು, ತಡಮಾಡುವದಿಲ್ಲ.
38 ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.
39 ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
ಅಧ್ಯಾಯ 11

1 ನಂಬಿಕೆಯು ನಿರೀಕ್ಷಿಸುವವುಗಳ ನಿಜ ಲಕ್ಷಣವೂ ಕಾಣದವುಗಳ ನಿದರ್ಶನವೂ ಆಗಿದೆ.
2 ಹಿರಿಯರು ನಂಬಿಕೆಯಿಂದಲೇ ಒಳ್ಳೇ ಸಾಕ್ಷಿ ಹೊಂದಿದರು.
3 ನಂಬಿಕೆಯಿಂದಲೇ ಲೋಕಗಳು ದೇವರ ಮಾತಿನಿಂದ ನಿರ್ಮಿತವಾದವೆಂದು ನಾವು ತಿಳುಕೊಂಡದ್ದರಿಂದ ಕಾಣಿಸುವವುಗಳು ದೃಶ್ಯ ವಸ್ತು ಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.
4 ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞ ಕ್ಕಿಂತ ಅತಿ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮ ರ್ಪಿಸಿದನು. ಅದರ ಮೂಲಕ ಅವನು ನೀತಿವಂತ ನೆಂದು ಸಾಕ್ಷಿ ಹೊಂದಿದನು: ದೇವರು ಅವನ ಕಾಣಿಕೆಗಳ ವಿಷಯವಾಗಿ ಸಾಕ್ಷಿಕೊಟ್ಟನು; ಅವನು ಸತ್ತವನಾಗಿದ್ದರೂ ಅದರಿಂದ ಇನ್ನೂ ಮಾತನಾಡುತ್ತಾನೆ.
5 ಹನೋಕನು ಮರಣವನ್ನು ಅನುಭವಿಸದೆ ಒಯ್ಯ ಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡು ಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಉಂಟು.
6 ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ಯಾಕಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ, ತನ್ನನ್ನು ಜಾಗ್ರತೆಯಾಗಿ ಹುಡುಕು ವವನಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬು ವದು ಅವಶ್ಯ.
7 ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು.
8 ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.
9 ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು.
10 ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು.
11 ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು.
12 ಆದದರಿಂದ ಮೃತಪ್ರಾಯನಾಗಿದ್ದ ಒಬ್ಬ ನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಉಸುಬಿನಂತೆ ಅಸಂಖ್ಯ ವಾಗಿಯೂ ಹುಟ್ಟಿದರು.
13 ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು.
14 ಇಂಥ ಮಾತುಗಳನ್ನಾಡುವವರು ತಾವು ಒಂದು ದೇಶವನ್ನು ಹುಡುಕುವವರೆಂದು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ.
15 ತಾವು ಹೊರಟು ಬಂದಿದ್ದ ದೇಶದ ಮೇಲೆ ನಿಜವಾಗಿ ಮನಸ್ಸಿಟ್ಟವರಾಗಿದ್ದರೆ ತಿರಿಗಿ ಅಲ್ಲಿಗೆ ಹೋಗುವದಕ್ಕೆ ಅವರಿಗೆ ಅವಕಾಶವಿತ್ತು.
16 ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ.
17 ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು.
18 ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು.
19 ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು.
20 ನಂಬಿಕೆಯಿಂದಲೇ ಇಸಾಕನು ಮುಂದೆ ಬರ ಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು.
21 ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
22 ಯೋಸೇಫನು ಸಾಯುವಾಗ ಇಸ್ರಾಯೇಲಿನ ಮಕ್ಕಳು ಹೊರಡುವದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು.
23 ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರು ವದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
24 ಮೋಶೆಯು ದೊಡ್ಡವ ನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿ ಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ.
25 ಸ್ವಲ್ಪ ಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವಜನರೊಂದಿಗೆ ಕಷ್ಟವನ್ನನುಭವಿಸುವದನ್ನೇ ಆರಿಸಿ ಕೊಂಡನು.
26 ಐಗುಪ್ತದಲ್ಲಿನ ಐಶ್ವರ್ಯಗಳಿಗಿಂತಲೂ ಕ್ರಿಸ್ತನ ವಿಷಯವಾದ ನಿಂದೆಯು ಅಧಿಕ ಐಶ್ವರ್ಯ ವೆಂದೆಣಿಸಿಕೊಂಡನು; ಯಾಕಂದರೆ ಪ್ರತಿಫಲದ ಬಹು ಮಾನವನ್ನು ಅವನು ಗೌರವಿಸಿದನು.
27 ನಂಬಿಕೆ ಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತ ದೇಶವನ್ನು ತೊರೆದುಬಿಟ್ಟನು. ಯಾಕಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.
28 ಇಸ್ರಾಯೇಲ್ಯರ ಚೊಚ್ಚಲಮಕ್ಕಳನ್ನು ಸಂಹರಿಸುವವನು ಅವರನ್ನು ಮುಟ್ಟದಂತೆ ಅವನು ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ.
29 ನಂಬಿಕೆಯಿಂದಲೇ ಇಸ್ರಾಯೇಲ್ಯರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು; ಐಗುಪ್ತ ದೇಶದವರು ಅದನ್ನು ದಾಟು ವದಕ್ಕೆ ಪ್ರಯತ್ನಿಸಿ ಮುಳುಗಿಹೋದರು.
30 ನಂಬಿಕೆ ಯಿಂದಲೇ ಅವರು ಸುಮಾರು ಏಳು ದಿವಸಗಳು ಯೆರಿಕೋವಿನ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು.
31 ನಂಬಿಕೆಯಿಂದಲೇ ರಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿ ಕೊಂಡು ನಂಬದವರೊಂದಿಗೆ ನಾಶವಾಗಲಿಲ್ಲ.
32 ಇನ್ನೂ ಏನು ಹೇಳಬೇಕು? ಗಿಡಿಯೋನ್‌ ಬಾರಾಕ್‌ ಸಂಸೋನ್‌ ಎಫ್‌ಥ ದಾವೀದ್‌ ಸಮುವೇಲ್‌ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವದಕ್ಕೆ ನನಗೆ ಸಮಯ ಸಾಲದು.
33 ನಂಬಿಕೆಯ ಮೂಲಕ ಅವರು ರಾಜ್ಯಗಳನ್ನು ಸ್ವಾಧೀನ ಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡ ಕೊಂಡರು; ಸಿಂಹಗಳ ಬಾಯಿ ಕಟ್ಟಿದರು.
34 ಬೆಂಕಿಯ ಬಲವನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು.
35 ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರಿಗಿ ಹೊಂದಿದರು; ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿದರು.
36 ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.
37 ಕೆಲವರನ್ನು ಕಲ್ಲೆಸೆ ದರು; ಕೆಲವರನ್ನು ಗರಗಸದಿಂದ ಕೊಯ್ದುಕೊಂದರು. ಕೆಲವರನ್ನು ಪರಿಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು; ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮ ಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.
38 ಇಂಥವರಿಗೆ ಈ ಲೋಕವು ಯೋಗ್ಯವಾದದ್ದಲ್ಲ; ಅವರು ಭೂಮಿಯ ಕಾಡು ಬೆಟ್ಟ ಗವಿ ಕುಣಿಗಳಲ್ಲಿ ಅಲೆಯುವವರಾಗಿದ್ದರು.
39 ಇವರೆಲ್ಲರೂ ನಂಬಿಕೆಯ ಮೂಲಕ ಒಳ್ಳೇ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವನ್ನು ಹೊಂದಲಿಲ್ಲ;
40 ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ದೇವರು ನಮಗೋಸ್ಕರ ಶ್ರೇಷ್ಠ ವಾದದ್ದನ್ನು ಏರ್ಪಡಿಸಿದ್ದನು.
ಅಧ್ಯಾಯ 12

1 ಆದಕಾರಣ ಸಾಕ್ಷಿಯವರ ಇಷ್ಟು ದೊಡ್ಡ ಮೇಘವು ನಮ್ಮ ಸುತ್ತಲು ಇರುವದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು
2 ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ
3 ನೀವು ಮನಗುಂದಿದವರಾಗಿ ಬೇಸರಗೊಳ್ಳ ದಂತೆ ಆತನು ತಾನೇ ಪಾಪಿಗಳಿಂದ ಎಷ್ಟೋ ವಿರೋಧ ವನ್ನು ಸಹಿಸಿ ಕೊಂಡನೆಂಬದನ್ನು ನೀವು ಆಲೋಚಿಸಿರಿ.
4 ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವದರಲ್ಲಿ ರಕ್ತದ ಮಟ್ಟಿಗೂ ಇನ್ನೂ ಅದನ್ನು ಎದುರಿಸಲಿಲ್ಲ.
5 ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ--ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಇಲ್ಲವೆ ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳ ಬೇಡ;
6 ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸು ತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು.
7 ನೀವು ಶಿಕ್ಷೆಯನ್ನು ತಾಳಿಕೊಂಡರೆ ದೇವರು ನಿಮ್ಮನ್ನು ಪುತ್ರರೆಂದು ನಡಿಸು ತ್ತಾನೆ. ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ?
8 ನೀವು ಶಿಕ್ಷೆ ಹೊಂದುವವರೆಲ್ಲರೊಂದಿಗೆ ಪಾಲುಗಾರ ರಾಗಿರದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಪುತ್ರರಲ್ಲ.
9 ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದಂಥ ಶರೀರ ಸಂಬಂಧವಾದ ತಂದೆಗಳನ್ನು ಸನ್ಮಾನಿ ಸಿದೆವಷ್ಟೆ; ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಎಷ್ಟೋ ಹೆಚ್ಚಾಗಿ ಒಳಪಟ್ಟು ಜೀವಿಸಬೇಕಲ್ಲವೇ?
10 ಅವರು ನಿಜವಾಗಿಯೂ ಕೆಲವು ದಿವಸಗಳ ಪ್ರಯೋ ಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗ ಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾನೆ.
11 ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರ ವಾಗಿ ತೋಚದೆ ಕ್ರೂರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನ ವುಳ್ಳ ನೀತಿಯ ಫಲವನ್ನು ಕೊಡುತ್ತದೆ.
12 ಹೀಗಿರುವದ ರಿಂದ ಜೋಲು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ.
13 ನಿಮ್ಮ ಪಾದ ಗಳಿಗೆ ನೀಟಾದ ದಾರಿಗಳನ್ನು ಮಾಡಿರಿ; ಹೀಗೆ ಮಾಡಿದರೆ ಕುಂಟಕಾಲು ಉಳುಕಿ ಹೋಗದೆ ವಾಸಿಯಾಗುವದು.
14 ಎಲ್ಲರ ಸಂಗಡ ಸಮಾಧಾನದಿಂದಿರುವದನ್ನೂ ಪರಿಶುದ್ಧತೆಯನ್ನೂ ಅನುಸರಿಸಿರಿ; ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವದಿಲ್ಲ.
15 ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ
16 ಯಾವ ಜಾರನಾಗಲಿ--ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆ ಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದು ತುತ್ತನ್ನಕ್ಕಾಗಿ ತನ್ನ ಚೊಚ್ಚಲತನದ ಹಕ್ಕನ್ನು ಮಾರಿ ಬಿಟ್ಟನು;
17 ತರುವಾಯ ಅವನು (ತನ್ನ ತಂದೆಯ) ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲಿರಿ.
18 ಮುಟ್ಟಬಹುದಾದ ಮತ್ತು ಬೆಂಕಿ ಹತ್ತಿದಂಥ ಬೆಟ್ಟಕ್ಕೂ ಮೊಬ್ಬಿಗೂ ಕತ್ತಲೆಗೂ ಬಿರುಗಾಳಿಗೂ
19 ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. ಆ ಶಬ್ದವನ್ನು ಕೇಳಿದವರು ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು;
20 (ಯಾಕಂದರೆ ಯಾವ ಮೃಗವಾ ದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲ ಬೇಕು, ಇಲ್ಲವೆ ಈಟಿಯಿಂದ ತಿವಿಯಬೇಕೆಂದು ಅವರು ಆಜ್ಞಾಪಿಸಿದ್ದನ್ನು ತಾಳಲಾರದೆ ಇದ್ದರು.
21 ಇದಲ್ಲದೆ ಅಲ್ಲಿ ತೋರಿದ್ದು ಅಷ್ಟು ಭಯಂಕರವಾಗಿದ್ದದರಿಂದ ಮೋಶೆಯು--ನನಗೆ ಬಹು ಭಯವಾಗುತ್ತದೆ, ನಡು ಗುತ್ತೇನೆ ಎಂದು ಹೇಳಿದನು).
22 ಆದರೆ ನೀವು ಚೀಯೋನ್‌ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ
23 ಪರ ಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಸಾರ್ವತ್ರಿಕ ಸಂಘಕ್ಕೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾ ಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ
24 ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25 ನೀವು ಮಾತನಾಡು ತ್ತಿರುವಾತನನ್ನು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಯಾಕಂದರೆ ಭೂಮಿಯ ಮೇಲೆ ಮಾತನಾಡಿದವನನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ ಪರ ಲೋಕದಿಂದ ಮಾತನಾಡುವಾತನಿಂದ ನಾವು ತೊಲಗಿ ದರೆ ಎಷ್ಟೋ ಹೆಚ್ಚಾಗಿ ನಾವು ತಪ್ಪಿಸಿಕೊಳ್ಳಲಾರೆವು.
26 ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು; ಈಗಲಾದರೋ ಆತನು--ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆಂದು ವಾಗ್ದಾನ ಮಾಡಿ ಹೇಳಿದ್ದಾನೆ.
27 ಇದಲ್ಲದೆ ಇನ್ನೊಂದೇ ಸಾರಿ ಎಂಬ ಮಾತು ಕದಲಿ ಸಿರುವ ವಸ್ತುಗಳು ನಿರ್ಮಿತವಾದವುಗಳಾದದರಿಂದ ತೆಗೆದುಹಾಕಲ್ಪಡ ಬೇಕೆಂಬದನ್ನು ಸೂಚಿಸುತ್ತದೆ; ಆಗ ಕದಲಿಸದೆ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು.
28 ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆಯುವವರಾದ ನಾವು ವಿನಯದಿಂದಲೂ ದೇವರ ಭಯದಿಂದಲೂ ದೇವರನ್ನು ಯೋಗ್ಯವಾಗಿ ಸೇವಿಸು ವಂತೆ ಕೃಪೆಯನ್ನು ಹೊಂದಿಕೊಳ್ಳೋಣ.
29 ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
ಅಧ್ಯಾಯ 13

1 ಸಹೋದರ ಪ್ರೀತಿಯು ನೆಲೆಯಾಗಿರಲಿ.
2 ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
3 ಸೆರೆಯವರ ಸಂಗಡ ನೀವೂ ಬಂಧಿಸಲ್ಪಟ್ಟವರೆಂದು ಅವರನ್ನು ಜ್ಞಾಪಕ ಮಾಡಿಕೊಳ್ಳಿರಿ. ನೀವು ಶರೀರದಲ್ಲಿರುವ ದರಿಂದ ಕಷ್ಟವನ್ನು ಅನುಭವಿಸುವವರನ್ನು ನೆನಸಿರಿ.
4 ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.
5 ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ.
6 ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
7 ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಅಂತ್ಯದ ವರೆಗೆ ಯಾವ ರೀತಿಯಿಂದ ನಡೆದುಕೊಂಡರೆಂದು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.
8 ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.
9 ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ಯಾಕಂದರೆ ಕೃಪೆಯೊಂದಿಗೆ ಹೃದಯವನ್ನು ದೃಢ ಮಾಡಿಕೊಳ್ಳುವದು ಉತ್ತಮವೇ; ಭೋಜನ ಪದಾರ್ಥಗಳಲ್ಲಿ ಮಗ್ನರಾದವರು ಅವುಗಳಲ್ಲಿ ಏನೂ ಪ್ರಯೋಜನ ಹೊಂದಲಿಲ್ಲ.
10 ನಮಗೊಂದು ಯಜ್ಞವೇದಿ ಉಂಟು, ಅದರ ಪದಾರ್ಥವನ್ನು ತಿನ್ನುವದಕ್ಕೆ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.
11 ಮಹಾಯಾಜಕನು ಪಾಪದ ನಿಮಿತ್ತವಾಗಿ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗಲು ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲಾ;
12 ಅದರಂತೆ ಯೇಸು ಕೂಡ ತನ್ನ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಊರ ಬಾಗಿಲ ಹೊರಗೆ ಶ್ರಮೆಪಟ್ಟನು.
13 ಆದದರಿಂದ ನಾವು ಆತನ ನಿಮಿತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ ಪಾಳೆಯದ ಆಚೆ ಆತನ ಬಳಿಗೆ ಹೊರಟು ಹೋಗೋಣ.
14 ಯಾಕಂದರೆ ಶಾಶ್ವತವಾದ ಪಟ್ಟಣವು ಇಲ್ಲಿ ನಮ್ಮಗಿಲ್ಲ; ಮುಂದೆ ಬರುವ ಪಟ್ಟಣವನ್ನು ಹುಡು ಕುತ್ತಾ ಇದ್ದೇವೆ.
15 ಆದದರಿಂದ ಆತನ ಮೂಲಕ ವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆ ಬಿಡದೆ ಸಮರ್ಪಿಸೋಣ, ಅಂದರೆ ನಮ್ಮ ತುಟಿಗಳಿಂದ ಆತನ ನಾಮಕ್ಕೆ ಸಲ್ಲಿಸುವ ಸ್ತೋತ್ರಗಳ ಫಲವೇ ಆದಾಗಿದೆ.
16 ಇದಲ್ಲದೆ ಒಳ್ಳೆಯದನ್ನು ಮಾಡುವದನ್ನೂ ಉದಾರವಾಗಿ ಕೊಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
17 ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರ್ರಿ. ಯಾಕಂದರೆ ಅವರು ಲೆಕ್ಕ ಒಪ್ಪಿಸಬೇಕಾ ದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.
18 ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳ ಬೇಕೆಂದು ಅಪೇಕ್ಷಿಸುವವರಾದ ನಮಗೆ ಒಳ್ಳೇ ಮನಸ್ಸಾಕ್ಷಿ ಇದೆಯೆಂದು ನಂಬಿದ್ದೇವೆ.
19 ನೀವು ಇದನು ಮಾಡುವಂತೆ ನಾನು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ; ಇದರ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.
20 ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
21 ನಿಮ್ಮನ್ನು ಸಕಲ ಸತ್ಕಾರ್ಯಗಳಲ್ಲಿ ಆತನ ಚಿತ್ತವನ್ನು ಮಾಡುವಂತೆ ಪರಿಪೂರ್ಣ ಮಾಡಲಿ. ತನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದ ದ್ದನ್ನು ಯೇಸು ಕ್ರಿಸ್ತನ ಮೂಲಕ ನಿಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್‌.
22 ಸಹೋದರರೇ, ಈ ಎಚ್ಚರಿಕೆಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.
23 ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬದು ನಿಮಗೆ ತಿಳಿದಿರಲಿ; ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
24 ನಿಮ್ಮ ಸಭಾನಾಯಕರೆಲ್ಲರಿಗೆ ಮತ್ತು ಪರಿಶುದ್ಧರೆಲ್ಲರಿಗೆ ವಂದನೆ. ಇತಾಲ್ಯದವರು ನಿಮ್ಮನ್ನು ವಂದಿಸುತ್ತಾರೆ.
25 ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್‌.